ಇಂಫಾಲ್: ಇತ್ತೀಚೆಗಷ್ಟೇ ಹಿಂಸಾಚಾರದಿಂದ ನಲುಗಿಹೋಗಿದ್ದ ಮಣಿಪುರದಲ್ಲಿ ಮತ್ತೆ ಗಲಭೆಗಳ ಕಿಡಿ ಹೊತ್ತಿಕೊಂಡಿದ್ದು, 2 ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ ದುಷ್ಕರ್ಮಿಗಳು 7 ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ. ಮತ್ತೂಂದು ಪ್ರತ್ಯೇಕ ಘಟನೆಯಲ್ಲಿ ಓರ್ವ ಯುವಕನನ್ನು ಗುಂಡಿಟ್ಟು ಬುಧವಾರ ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಮೊಯಿರಂಗ್ ಎಂಬ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಗಲಭೆ ನಡೆಯುತ್ತಿರುವುದು ವರದಿಯಾದ ಹಿನ್ನೆಲೆ ಭದ್ರತಾ ಸಿಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನೋಡ ನೋಡುತ್ತಿದ್ದಂತೆಯೇ ಓರ್ವ ಯುವಕನ ಬೆನ್ನಿಗೆ ಗುಂಡು ತಗಲಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿರುವಾಗಲೇ ಮಾರ್ಗ ಮಧ್ಯೆಯೇ ಯುವಕ ಮೃತಪಟ್ಟಿದ್ದಾನೆ.
ಆತನ ಬೆನ್ನಿಗೆ ಹೊಕ್ಕ ಗುಂಡು ಎದೆ ಸೀಳಿ ಹೊರಬಂದಿದ್ದರ ಪರಿಣಾಮ ತೀವ್ರವಾಗಿ ಗಾಯಗೊಂಡು ಯುವಕ ಮೃತಪಟ್ಟಿದ್ದು, ಆತನನ್ನು ಚುರಾಚಂದಪುರ ನಿವಾಸಿ ತೋಯಜಂ ಚಂದ್ರಮಣಿ ಎಂದು ಗುರುತಿಸಲಾಗಿದೆ. ಯುವಕ ಮೃತ ಪಡುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸಿದ್ದು, ಆಸ್ಪತ್ರೆ ಬಳಿ ಸೇರಿದ್ದ ಜನರನ್ನು ಪೊಲೀಸರು ನಿಯಂತ್ರಿಸಿದ್ದಾರೆ.
ಮತ್ತೂಂದೆಡೆ ಫೌಬಕ್ಚಾವೋ ಎಂಬಲ್ಲಿ ಮಂಗಳವಾರ ತಡರಾತ್ರಿ ಸಮುದಾಯವೊಂದರ ಸದಸ್ಯರು ಮತ್ತೂಂದು ಸಮುದಾಯದವರ 3 ಮನೆಗಳಿಗೆ ಬೆಂಕಿ ಹಚ್ಚಿದ್ದರು. ಪ್ರತೀಕಾರವಾಗಿ ಮತ್ತೂಂದು ಸಮುದಾಯದವರು ಕೂಡ 4 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ಫ್ಯೂ ವಿನಾಯಿತಿ ವಾಪಸ್
ಮೇ 4 ರಿಂದಲೂ ಮಣಿಪುರದ ಹಲವು ಭಾಗಗಳಲ್ಲಿ ಗಲಭೆಗಳು, ಹಿಂಸಾಚಾರಗಳಾಗುತ್ತಿರುವ ಹಿನ್ನೆಲೆ ಹಲವೆಡೆ ಕರ್ಫ್ಯೂ ವಿಧಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಬಿಷ್ಣುಪುರದಲ್ಲಿ ಇತ್ತೀಚೆಗಷ್ಟೇ ಕರ್ಫ್ಯೂನಿಂದ ಬಿಡುಗಡೆ ನೀಡಲಾಗಿತ್ತು. ಆದರೆ ಮಂಗಳವಾರ ಹಾಗೂ ಬುಧವಾರ ನಡೆದ ಘಟನೆಗಳಿಂದಾಗಿ ಮತ್ತೆ ಕರ್ಫ್ಯೂ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.