ಮುಳಬಾಗಿಲು: ನಗರದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ವಾಹನ ಸವಾರರಿಗೆ ಮತ್ತು ಅವಧಿ ಮೀರಿದರೂ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಮುಚ್ಚಿಸಿದರು.
ನಗರದ ಬುಸಾಲಕುಂಟೆ, ತಾಲೂಕಿನ ಸೊನ್ನವಾಡಿ, ಬೆಳಗಾನಹಳ್ಳಿ, ಬೈರಸಂದ್ರ ಮತ್ತು ವಿ.ಹೊಸಹಳ್ಳಿ ಗ್ರಾಮ ಗಳಲ್ಲಿ ಏಳು ಜನರಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡ ಕಾರಣ ಜಿಲ್ಲಾಡಳಿತ ಸೀಲ್‌ಡೌನ್ ಮಾಡಿ ಕಂಟೇನ್‌ಮೆಂಟ್ ಜೋನ್‌ಗಳಾಗಿ ಘೋಷಿಸಿದೆ.
ನಗರಸಭೆ ವ್ಯಾಪ್ತಿಯಲ್ಲಿ ಮೇ 13ರಿಂದ ಜನರಿಗೆ ದಿನಸಿ, ಹಾಲು ಮತ್ತು ತರಕಾರಿ ಖರೀದಿಗೆ ಬೆಳಗ್ಗೆ 7 ರಿಂದ 11 ಗಂಟೆಯವರೆಗೂ ಮಾತ್ರ ಅಂಗಡಿ ತೆರೆ ಯಲು ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಸಾರ್ವಜನಿಕರು ಹಾಗೂ ಅಂಗಡಿ ಮಾಲಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,
ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸುವಂತೆ ಆದೇಶಿಸ ಲಾಗಿದ್ದರೂ ಶನಿವಾರ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ವಾಹನ ಸವಾರರಿಗೆ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಬೆಳಗ್ಗೆ 7ರಿಂದ 11 ಗಂಟೆಯ ನಂತರವೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮಾಲಿಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, ನಿಗದಿತ ಅವಧಿಯೊಳಗೆ ಅಂಗಡಿಗಳನ್ನು ಮುಚ್ಚಬೇಕು,
ತಪ್ಪಿದಲ್ಲಿ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿ ಬಾಗಿಲು ಮುಚ್ಚಿಸಿದರು. ಈ ಸಂದರ್ಭದಲ್ಲಿ ನೋಡಲ್ ಎಂಜಿನಿಯರ್ ಡಾ.ಸುನೀಲ್‌ಕುಮಾರ್, ಕಿರಿಯ ಆರೋಗ್ಯಾಧಿಕಾರಿ ಶಿವಾರೆಡ್ಡಿ, ಸಿಬ್ಬಂದಿಗಳಾದ ಸುಬ್ರಮಣಿ, ಗಂಗಾಧರ್, ಸತೀಶ್, ನಾಗೇಶ್, ಶ್ರೀಕಾಂತ್, ನಾಗರಾಜ್ ಇತರರಿದ್ದರು.