ಮಡಿಕೇರಿ : ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ, ಗೃಹಪ್ರವೇಶದ ಕುತ್ತಿಪೂಜೆ ಮಾಡಿದ ಹಾಗೂ ಈ ಕಾರ್ಯಕ್ರಮಕ್ಕೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ಜನರನ್ನು ಕರೆತಂದ ಇಬ್ಬರ ಮೇಲೆ ಪಂಚಾಯತ್ ವತಿಯಿಂದ ದೂರು ನೀಡಲಾದ ಘಟನೆ ಚೆಂಬುವಿನಿಂದ ವರದಿಯಾಗಿದೆ.
ಕೊಡಗಿನ ಕರಿಕೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಅವರು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೆಂಬು ಗ್ರಾಮದ ಮೇಲ್ಚೆಂಬು ಪುರುಷೋತ್ತಮ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಗೃಹಪ್ರವೇಶದ ಕುತ್ತಿಪೂಜೆ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಅವರ ಕುಟುಂಬದವರೇ ಆದ ಪೂಜಾರಿಗದ್ದೆ ಲಕ್ಷ್ಮೀಶ ಎಂಬವರು ಕರಿಕೆಯ ಕೋವಿಡ್ ಸೋಂಕಿತರ ಮನೆಯವರನ್ನು ಕಾರಿನಲ್ಲಿ ಕರೆತಂದಿದ್ದರೆನ್ನಲಾಗಿದೆ.
ಇಂದು ಬೆಳಿಗ್ಗೆ ಚೆಂಬು ಗ್ರಾ.ಪಂ.ನವರಿಗೆ ಈ ವಿಚಾರ ತಿಳಿದು, ಕೋವಿಡ್ ಕಾರ್ಯಪಡೆಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿಗೆ ಕೋವಿಡ್ ಸೋಂಕಿತರ ಮನೆಯವರು ಬಂದಿರುವುದು ಮತ್ತು ಕುತ್ತಿಪೂಜೆಗೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿರುವುದು ತಿಳಿದುಬಂತೆನ್ನಲಾಗಿದೆ. ಅವರೆಲ್ಲರನ್ನೂ ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಯಿತು. ಅಲ್ಲದೇ, ಘಟನೆಯ ಕುರಿತು ಪಂಚಾಯತ್‌ನವರು ಸಂಪಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪಂಚಾಯತ್ ಅನುಮತಿ ಪಡೆಯದೇ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಪುರುಷೋತ್ತಮ ಅವರ ಮೇಲೆ ಹಾಗೂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಲಕ್ಷ್ಮೀಶ ಅವರ ಮೇಲೆ ದೂರು ನೀಡಲಾಗಿದೆ.