ಚಿಕ್ಕಮಗಳೂರು: ಬಾಬಾ ಬುಡನ್ ಗಿರಿಯ ಗುಹೆಯೊಳಗೆ ದತ್ತ ಪಾದುಕೆ ದರ್ಶನದ ವೇಳೆ ಸಚಿವ ಸಿ.ಟಿ ರವಿಯಿಂದ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ್ದ ಸಿ.ಟಿ.ರವಿ ಸೋಮವಾರ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಬಾಬಾ ಬುಡನ್ ಗಿರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಗುಹೆಯೊಳಗೆ ಇರುವ ದತ್ತಪಾದುಕೆಗಳ ದರ್ಶನ ಪಡೆದಿದ್ದಾರೆ.
ದರ್ಶನದ ವೇಳೆ ಸಿ.ಟಿ.ರವಿ ಜೊತೆಯಲ್ಲಿದ್ದವರು ಗುಹೆಯೊಳಗೆ ವಿಡಿಯೋ ಮಾಡಿರುವುದಲ್ಲದೇ ಪೊಟೊಗಳನ್ನೂ ತೆಗೆದಿದ್ದಾರೆ.
ಇದನ್ನೂ ಓದಿ:ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ
ಬಾಬಾ ಬುಡನ್ ಗಿರಿ ದತ್ತಪೀಠದ ವಿವಾದದ ಹಿನ್ನೆಲೆಯಲ್ಲಿ ಸರಕಾರದ ಮುಜರಾಯಿ ಇಲಾಖೆ ಈ ಹಿಂದೆ ಗುಹೆಯೊಳಗೆ ಪೊಟೊ ವಿಡಿಯೋ ಮಾಡುವುದನ್ನು ನಿಷೇದಿಸಿ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ದತ್ತ ಪಾದುಕೆಗಳ ದರ್ಶನಕ್ಕೆ ಬರುವವರಿಗೆ ಜಿಲ್ಲಾಡಳಿತ ಗುಹೆಯೊಳಗೆ ಪೊಟೊ, ವಿಡಿಯೋ ತೆಗೆಯಬಾರದೆಂದು ಷರತ್ತು ವಿಧಿಸಿದೆ.
ಆದರೆ ಸೋಮವಾರ ಸಚಿವ ಸಿಟಿ ರವಿ ಹಾಗೂ ಅವರ ಬೆಂಬಲಿಗರು ಗುಹೆಯೊಳಗೆ ಪೊಟೊ ತೆಗೆದಿರುವುದಲ್ಲದೇ, ವಿಡಿಯೋ ಕೂಡ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರಕಾರದ ಪ್ರತಿನಿಧಿಯಾಗಿ, ವಿವಾದಿತ ಸ್ಥಳವೊಂದರ ಬಗ್ಗೆ ಸರಕಾರದ ಕಾನೂನುಗಳ ಮಾಹಿತಿ ಇದ್ದರೂ ಸಚಿವ ಸಿ.ಟಿ.ರವಿ ಉದ್ದೇಶ ಪೂರ್ವಕವಾಗಿ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ದತ್ತ ಪಾದುಕೆಗಳ ಸಂದರ್ಭ ಜಿಲ್ಲೆಯ ಮುಜಾರಾಯಿ ಇಲಾಖೆಯ ಅಧಿಕಾರಿಗಳು ಸಿ.ಟಿ ರವಿ ಅವರೊಂದಿಗಿದ್ದು, ಕಾನೂನು ಉಲ್ಲಂಘನೆಗೆ ಅಧಿಕಾರಿಗಳು ಸಾಥ್ ನೀಡಿದ್ದಾರೆಂದೂ ಅರೋಪಿಸಲಾಗುತ್ತಿದೆ.
ಇನ್ನು ಈ ಘಟನೆ ಸಂಬಂಧ ಜಿಲ್ಲಾಡಳಿತ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿದೆ.