ಜೈಪುರ : ಪಾಕಿಸ್ಥಾನದ ವಾಯು ಪ್ರದೇಶದಿಂದ ಬಂದ, ಭಾರೀ ಸರಕು ತುಂಬಿದ ಜಾರ್ಜಿಯಾ ವಿಮಾನವನ್ನು ವಾಯು ಮಾರ್ಗ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಭಾರತೀಯ ವಾಯು ಪಡೆಯ (ಐಎಎಫ್) ಫೈಟರ್ ಜೆಟ್‌ಗಳು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದವೆಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದ ಕರಾಚಿಯಿಂದ ದಿಲ್ಲಿಗೆ ಹೋಗಲಿದ್ದ ಆಂತೋನೋವ್ ಎಎನ್-12 ಜಾರ್ಜಿಯಾ ವಿಮಾನ ತನ್ನ ನಿಗದಿತ ಹಾರಾಟ ಮಾರ್ಗದಿಂದ ವಿಮುಖವಾಗಿ ಉತ್ತರ ಗುಜರಾತ್‌ನ ಅನಿರ್ಧರಿತ ಪ್ರದೇಶದಿಂದ ಭಾರತೀಯ ವಾಯು ವಲಯವನ್ನು ಪ್ರವೇಶಿಸಿತು ಎಂದು ವರದಿಗಳು ತಿಳಿಸಿವೆ.
ದೇಶದ ವಾಯು ಗಡಿಯಲ್ಲಿ ಅತ್ಯಂತ ಕಟ್ಟೆಚ್ಚರದಿಂದಿದ್ದ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಗಳು ಆ ಸಂದರ್ಭದಲ್ಲಿ ತತ್‌ಕ್ಷಣ ಕಾರ್ಯೋನ್ಮುಖವಾಗಿ ಜಾರ್ಜಿಯಾ ಸರಕು ಸಾಗಣೆ ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದವು.
ಜಾರ್ಜಿಯಾ ಸರಕು ವಿಮಾನ ತನ್ನ ವೇಳಾ ಪಟ್ಟಿಗೆ ಅನುಗುಣವಾಗಿ ಹಾರಾಟ ಕೈಗೊಂಡಿತ್ತಾದರೂ ಅದರ ವಾಯು ಮಾರ್ಗ ತಪ್ಪಾಗಿತ್ತು. ಇದೀಗ ಜಾರ್ಜಿಯಾ ವಿಮಾನದ ಪೈಲಟ್‌ನನ್ನು ಪ್ರಶ್ನಿಸಲಾಗುತ್ತಿದ್ದು ವಿಮಾನವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗುತ್ತಿದೆ. ಪೊಲೀಸರು ವಿಮಾನ ನಿಲ್ದಾಣಕ್ಕೆ ಧಾವಿಸಿ ಬಂದಿದ್ದು ಸಿಐಎಸ್‌ಎಫ್ ಅಧಿಕಾರಿಗಳು ಜಾರ್ಜಿಯಾ ವಿಮಾನದ ಪೈಲಟ್ ನನ್ನು ಪ್ರಶ್ನಿಸುತ್ತಿದ್ದಾರೆ.
ಜಾರ್ಜಿಯಾ ವಿಮಾನವನ್ನು ಜೈಪುರದಲ್ಲಿ ಬಲವಂತವಾಗಿ ಇಳಿಸುವಲ್ಲಿ ಎರಡು ಸುಖೋಯ್ ಫೈಟರ್‌ಗಳು ಬೆಂಗಾವಲಿಗೆ ಇದ್ದವು.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.