Advertisement

ವಿಂಟೇಜ್‌ ಕಾರು ರ‍್ಯಾಲಿ 

04:16 PM Jan 27, 2018 | Team Udayavani |

ಮಹಾನಗರ : ಒಂದೊಮ್ಮೆ ಗತ್ತು ಗಮ್ಮತ್ತಿನಿಂದ ಮೆರೆದು ಬಳಿಕ ಹೊಸ ಪೀಳಿಗೆಗೆ ತಮ್ಮ ಸಾಮ್ರಾಜ್ಯವನ್ನು ಒಪ್ಪಿಸಿ
ಆರಾಮ ಪಡೆಯುತ್ತಿದ್ದ ಹಳೆ ಅರಸರು ಮತ್ತೆ ರಾಜಬೀದಿಗೆ ಇಳಿದು ಸವಾರಿ ನಡೆಸಿ ತಮ್ಮ ಹಿಂದಿನ ವೈಭವದ ದಿನಗಳನ್ನು ಮರುಕಳಿಸುವಂತೆ ಮಾಡಿದರು. ಇಲ್ಲಿ ಗತ ಕಾಲದಲ್ಲಿ ಬಹುಬೇಡಿಕೆಯಲ್ಲಿದ್ದ ವಾಹನಗಳೇ ಇಲ್ಲಿ ಹಳೆ ಅರಸರು. ಅವರು ಸವಾರಿಗೆ ಹೊರಟದ್ದು ಮಂಗಳೂರಿನ ರಾಜಬೀದಿಯಲ್ಲಿ.

Advertisement

ಗಣರಾಜ್ಯೋತ್ಸವ ಪ್ರಯುಕ್ತ ವಿಂಟೇಜ್‌ ಕಾರು ರ‍್ಯಾಲಿಯಲ್ಲಿ ಒಂದೊಮ್ಮೆ ಭಾರಿ ಆಕರ್ಷಣೆ ಮತ್ತು ಬೇಡಿಕೆಯಲ್ಲಿದ್ದು ಮೋಟಾರು ವಾಹನ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಫಲವಾಗಿ ನೇಪಥ್ಯದಲ್ಲಿ ಉಳಿದುಕೊಂಡಿದ್ದ ಹಳೆ ಕಾರು, ಜೀಪು, ಮೋಟಾರ್‌ ಬೈಕ್‌ ಗಳು ಜನಾಕರ್ಷಣೆ ಕೇಂದ್ರವಾದವು. ಮಂಗಳೂರು ಮೋಟಾರು ನ್ಪೋರ್ಟ್ಸ್ ಅಸೋಸಿಯೇಶನ್‌ ರ‍್ಯಾಲಿಯನ್ನು ಆಯೋಜಿಸಿತ್ತು.

ಹಲವು ಹಳೆಯ ಮಾದರಿಗಳು
ಸೂರಜ್‌ ಹೆನ್ರಿ ಅವರ 1939ರ ಡಿಕೆಡಬ್ಲ್ಯು ಮೋಟಾರ್‌ ಬೈಕ್‌ ಇದರಲ್ಲಿ ಪ್ರಧಾನ ಆಕರ್ಷಣೆಯಾಗಿತ್ತು.98 ಸಿಸಿಯ ಮೋಟಾರ್‌ಬೈಕ್‌ಗೆ ಕೈಯಲ್ಲೇ ಗೇರ್‌ ಹಾಕುವ ವ್ಯವಸ್ಥೆ ಇದೆ. ಉಳಿದಂತೆ 1960ರ ಮೊರಿಸ್‌, 1954ರ ಫಿಯಟ್‌ ಎಲಿಗೆಂಟ್‌ ಕಾರುಗಳು ಸೇರಿದಂತೆ ಹಲವಾರು ಹಿಂದಿನ ಮಾದರಿಯ ವಾಹನಗಳು ಗಮನ ಸೆಳೆದವು. ಶಾಸಕ ಜೆ. ಆರ್‌. ಲೋಬೋ ಅವರ 1960ರ ಫಿಯೆಟ್‌ ಕೂಡ ರ‍್ಯಾಲಿಯಲ್ಲಿ ಭಾಗವಹಿಸಿತ್ತು.

ವಾಹನ ಚಲಾಯಿಸಿದ ಐವನ್‌, ಕವಿತಾ ಸನಿಲ್‌
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ವಿಂಟೆಜ್‌ ಕಾರು ರ‍್ಯಾಲಿಯನ್ನು ಉದ್ಘಾಟಿಸಿದರು. ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರು ಹಳೆಯ ಮಾದರಿಯ ಆಟೋರಿಕ್ಷಾ ಹಾಗೂ ಮೇಯರ್‌ ಕವಿತಾ ಸನಿಲ್‌ ಅವರು ಸೇನೆಯಲ್ಲಿ ಬಳಕೆಯಲ್ಲಿದ್ದ ಎಕ್ಸ್‌ ಆರ್ಮಿ ವಿಲ್ಲಿಸ್‌ ಜೀಪು ಅನ್ನು ಚಲಾಯಿಸಿದರು. ಶಾಸಕ ಜೆ.ಆರ್‌. ಲೋಬೋ, ಮೂಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಗೇರು ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಮಂಗಳೂರು ಮೋಟಾರು ನ್ಪೋರ್ಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಸುಧೀರ್‌ , ಹರೀಶ್‌ ಸುವರ್ಣ, ನವೀನ್‌ ಮೊದಲಾದವರು ಉಪಸ್ಥಿತರಿದ್ದರು.

ರ‍್ಯಾಲಿ ಎ.ಬಿ. ಶೆಟ್ಟಿ ವೃತ್ತ, ಹಂಪನಕಟ್ಟೆ, ಪಿವಿಎಸ್‌ ವೃತ್ತ, ಎಂ.ಜಿ. ರಸ್ತೆ, ಲೇಡಿಹಿಲ್‌, ಬಂಟ್ಸ್‌ಹಾಸ್ಟೆಲ್‌ ಜ್ಯೋತಿ ವೃತ್ತ, ಹಂಪನಕಟ್ಟೆ ಮೂಲಕ ಸಾಗಿ ಫೋರಂ ಫಿಜಾ ಮಾಲ್‌ ನಲ್ಲಿ ಸಮಾರೋಪಗೊಂಡಿತು. 

Advertisement

40ಕ್ಕೂ ಅಧಿಕ ವಾಹನ
ವಿವಿಧ ಕಂಪೆನಿಗಳ ಹಳೆಯ ಕಾರುಗಳು, ಜೀಪುಗಳು, ಮೋಟಾರ್‌ ಬೈಕ್‌ಗಳು, ಸ್ಕೂಟರ್‌ಗಳು, ಆಟೋರಿಕ್ಷಾಗಳು ಸಹಿತ ಸುಮಾರು 40ಕ್ಕೂ ಅಧಿಕ ಹಳೆಯ ವಾಹನಗಳು ರ್ಯಾಲಿಯಲ್ಲಿ ಭಾಗವಹಿಸಿದ್ದವು. ವಿಲ್ಲಿಸ್‌ ಜೀಪುಗಳು, ಮೊರಿಸ್‌,ಫಿಯಟ್‌, ಯಜ್ಡಿ , ಜಾವಾ, ಹಿಂದಿನ ರಾಯಲ್‌ ಎನ್‌ ಫೀಲ್ಡ್‌ ಬೈಕ್‌, ಲ್ಯಾಂಬ್ರೆಟಾ ರಿಕ್ಷಾಗಳು, ಲ್ಯಾಂಬಿ ಸ್ಕೂಟರ್‌ ಮುಂತಾದ ವಾಹನಗಳು ಇದರಲ್ಲಿ ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next