“ಈ ಮಟ್ಟದ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ…’ – ಹೀಗೆ ಹೇಳಿ ಖುಷಿಯಾದರು ನಟ ವಿನೋದ್ ಪ್ರಭಾಕರ್. ಅವರ ಖುಷಿಗೆ ಕಾರಣ “ಫೈಟರ್’.
ಕಳೆದ ವಾರ ತೆರೆಕಂಡಿರುವ “ಫೈಟರ್’ ಚಿತ್ರಕ್ಕೆ ಎಲ್ಲೆಡೆಯಿಂಧ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು.
ಈ ವೇಳೆ ಮಾತನಾಡಿದ ವಿನೋದ್, “ಸಿನಿಮಾ ಆರಂಭವಾಗಿದ್ದು 2018ರಲ್ಲಿ. ಚಿತ್ರ ಈಗ ಬಿಡುಗಡೆಯಾಗಿದೆ. ಜನ ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಆದರೆ, ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಅದರಲ್ಲೂ ಚಿತ್ರದಲ್ಲಿನ ರೈತರ ಸಮಸ್ಯೆ ಕುರಿತು ಹೇಳಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದ್ವಿತೀಯಾರ್ಧದಲ್ಲಿ ಆ ಅಂಶವನ್ನು ಇನ್ನಷ್ಟು ಹೇಳಬೇಕಿತ್ತೆಂಬ ಮಾತೂ ಕೇಳಿಬಂದಿದೆ. ಈಗ ಜನರನ್ನು ಭೇಟಿಯಾಗಲು ನಾವು ಚಿತ್ರ ಮಂದಿರಗಳಿಗೆ ಭೇಟಿ ನೀಡಲಿದ್ದೇವೆ. ಮಾಸ್ ಫ್ಯಾನ್ಸ್ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾವನ್ನು ನೋಡಿ ಖುಷಿಪಡುತ್ತಿದ್ದಾರೆ’ ಎನ್ನುವುದು ವಿನೋದ್ ಮಾತು.
ನಾಯಕಿ ಲೇಖಾಚಂದ್ರ ಕೂಡಾ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಖುಷಿಯಿಂದ ಮಾತನಾಡಿದರು. “ಸಿನಿಮಾ ನೋಡಿದವರು ನನ್ನ ಪರ್‌ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದರು. ನಿರ್ದೇಶಕ ನೂತನ್ ಉಮೇಶ್, ನಿರ್ಮಾಪಕ ಸೋಮಶೇಖರ್ ಕೂಡಾ “ಫೈಟರ್’ ಓಟದ ಬಗ್ಗೆ ಖುಷಿಯಿಂದ ಮಾತನಾಡಿದರು.