Advertisement

CAS ನಲ್ಲಿ ಇಂದು ವಿಚಾರಣೆ: ವಿನೇಶ್ ಫೋಗಟ್ ಗೆ ಬೆಳ್ಳಿ ಸಿಗಲಿದೆಯೇ ಎನ್ನುವ ಭಾರೀ ನಿರೀಕ್ಷೆ

11:41 PM Aug 08, 2024 | Team Udayavani |

ಪ್ಯಾರಿಸ್: ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರ ಮನವಿಯನ್ನು ಗುರುವಾರ (ಆಗಸ್ಟ್ 8) ಆರ್ಬಿಟ್ರೇಷನ್ ನ್ಯಾಯಾಲಯವು (CAS) ವಿನೇಶ್ ಮನವಿಯನ್ನು ಸ್ವೀಕರಿಸಿದೆ.

Advertisement

ಪ್ಯಾರಿಸ್ ಕಾಲಮಾನದ ಮಧ್ಯಾಹ್ನ 3 ಗಂಟೆಗೆ, CAS ವಿನೇಶ್ ಅವರ ಮನವಿಯನ್ನು ಸ್ವೀಕರಿಸಿದ್ದು ಶುಕ್ರವಾರ ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ಕೇಳಿದೆ. ಏತನ್ಮಧ್ಯೆ, ಭಾರತ ಸರ್ಕಾರವು ಖ್ಯಾತ ವಕೀಲ ಹರೀಶ್ ಸಾಳ್ವೆ ಅವರನ್ನು ಪ್ರಕರಣಕ್ಕೆ ಮಂಡಳಿಗೆ ತರುವಂತೆ ಕೇಳಿಕೊಂಡಿದೆ. ವಕೀಲರು ಸಂಜೆ 6 ಗಂಟೆಗೆ (ಪ್ಯಾರಿಸ್ ಸಮಯ) ನೇಮಿಸಬೇಕಾಗುತ್ತದೆ, ಇದನ್ನು CASಗೆ ತಿಳಿಸಬೇಕು ಮತ್ತು ವಿಚಾರಣೆ ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ.

content-img

CAS(Court of Arbitration for Sport ) ವಿಚಾರಣೆಗೆ ಭಾರತೀಯ ವಕೀಲರನ್ನು ನೇಮಿಸಲು ಭಾರತೀಯ ತಂಡ ಸಮಯ ಕೇಳಿದೆ. CAS ಅವರಿಗೆ ತಮ್ಮ ವಕೀಲರನ್ನು ನೇಮಿಸಲು ಗುರುವಾರ 9:30 ಭಾರತೀಯ ಕಾಲಮಾನದ ವರೆಗೆ ಸಮಯ ನೀಡಿದೆ. ಈ ಹಿಂದೆ ಬಿಸಿಸಿಐ ಪರವಾಗಿ ಇತರ ದೊಡ್ಡ ಪ್ರಕರಣಗಳಲ್ಲಿ ಕಾಣಿಸಿಕೊಂಡಿರುವ ಹರೀಶ್ ಸಾಳ್ವೆ ಅವರನ್ನು ಮಂಡಳಿಯಲ್ಲಿ ಸೇರಿಸಲು ಭಾರತೀಯ ಶಿಬಿರ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ವಿನೇಶ್ ಮೊದಲ ಮನವಿಯನ್ನು ಫೈನಲ್‌ಗೆ ಮೊದಲು ತಿರಸ್ಕರಿಸಲಾಗಿತ್ತು. ಆಕೆಯ ಎರಡನೇ ಮನವಿ ಜಂಟಿ-ಬೆಳ್ಳಿ ಪದಕದ ಬೇಡಿಕೆಯನ್ನು ಪರಿಗಣಿಸಲಾಗಿತ್ತು.

Advertisement

ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಬೇಡಿ
ದುಃಖದ ಮನಃಸ್ಥಿತಿಯಲ್ಲಿರುವಾಗ ಕ್ರೀಡೆಯಿಂದ ನಿವೃತ್ತಿಯಾಗುವಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಭಾರತೀಯ ಕುಸ್ತಿ ಫೆಡರೇಶನ್‌ನ ಮುಖ್ಯಸ್ಥ ಸಂಜಯ್‌ ಸಿಂಗ್‌ ಒತ್ತಾಯಿಸಿದ್ದಾರಲ್ಲದೇ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಎದುರು ನೋಡುತ್ತಿದ್ದಾರೆ.

ದುರದೃಷ್ಟವಶಾತ್‌ ಅವರ ಬಹುಕಾಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. ಇದರಿಂದ ಅವರು ನಿವೃತ್ತಿಯ ನಿರ್ಧಾರ ಮಾಡಿರುವುದು ಸಾಮಾಜಿಕ ಜಾಲತಾಣದ ಮೂಲಕ ತಿಳಿಯಿತು. ಅವರ ಈ ನಿರ್ಧಾರದಿಂದ ನನಗೆ ಆಘಾತವಾಗಿದೆ. ಅವರು ನಿವೃತ್ತಿಯ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಲು ಫೆಡರೇಶನ್‌ ವತಿಯಿಂದ ಒತ್ತಾಯಿಸುತ್ತೇನೆ ಎಂದವರು ಹೇಳಿದರು.

ನಿರ್ಧಾರ ಮರುಪರಿಶೀಲಿಸಲಿ
ಕುಸ್ತಿಪಟು ಬಬಿತಾ ಪೋಗಾಟ್‌ ಅವರು ಗುರುವಾರ ತಮ್ಮ ಸೋದರ ಸಂಬಂಧಿ ವಿನೇಶ್‌ ಅವರು ತಮ್ಮ ನಿವೃತ್ತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ಹರಿಯಾಣ ಸರಕಾರದಿಂದ 4 ಕೋಟಿ ರೂ.
ಚಂಡೀಗಢ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಾಟ್‌ ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸಮ್ಮಾನಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಹೇಳಿದ್ದಾರೆ.
ಒಲಿಂಪಿಕ್‌ ಬೆಳ್ಳಿ ಗೆದ್ದವರಿಗೆ ನೀಡುವಷ್ಟು ಬಹುಮಾನವನ್ನು ವಿನೇಶ್‌ ಅವರಿಗೆ ನೀಡಲಾಗುವುದು. ಸರಕಾರದ ಕ್ರೀಡಾ ನೀತಿಯಂತೆ ಒಲಿಂಪಿಕ್‌ ಚಿನ್ನ ಗೆದ್ದವರಿಗೆ ಸರಕಾರ ಆರು ಕೋಟಿ ರೂ. ಬೆಳ್ಳಿಗೆ ನಾಲ್ಕು ಕೋಟಿ ರೂ. ಮತ್ತು ಕಂಚು ಪದಕ ವಿಜೇತರಿಗೆ 2.5 ಕೋಟಿ ರೂ. ನೀಡಲಿದೆ.
ನಮ್ಮ ಧೈರ್ಯಶಾಲಿ ಪುತ್ರಿ ವಿನೇಶ್‌ ಅದ್ಭುತ ನಿರ್ವಹಣೆ ನೀಡಿ ಫೈನಲಿಗೇರಿದ್ದರು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಫೈನಲಿನಲ್ಲಿ ಸ್ಪರ್ದಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ನಮಗೆಲ್ಲ ಚಾಂಪಿಯನ್‌ ಕುಸ್ತಿಪಟು ಆಗಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸರಕಾರವು ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸ್ವಾಗತ ಮತ್ತು ಸಮ್ಮಾನಿಸಲು ತೀರ್ಮಾನಿಸಿದ್ದೇವೆ ಎಂದರು.

ವಿನೇಶ್‌ ನಿವೃತ್ತಿ ಆಗಲ್ಲ: ಮಹಾವೀರ್‌
2028ರಲ್ಲಿ ನಡೆಯುವ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧೆ ಮಾಡುವಂತೆ ವಿನೇಶ್‌ ಅವರ ಮನವೊಲಿಸಲಾಗುವದು ಎಂದು ವಿನೇಶ್‌ ಅವರ ದೊಡ್ಡಪ್ಪ ಮಾಜಿ ಕುಸ್ತಿಪಟು ಮಹಾವೀರ್‌ ಪೋಗಾಟ್‌ ಹೇಳಿದ್ದಾರೆ. ಈ ಬಾರಿ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ತರುತ್ತಿದ್ದಳು. ಆದರೆ ಅನರ್ಹಗೊಂಡಳು. ಆದರೆ ಹೆಚ್ಚು ಬೇಸರ ತರಿಸಿದ್ದು ಅವರ ನಿವೃತ್ತಿ ನಿರ್ಧಾರ. ಮನೆಗೆ ಬಂದ ಕೂಡಲೇ ಅವಳೊಂದಿಗೆ ಮಾತನಾಡಿ, ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಮನವೊಲಿಸುತ್ತೇನೆ ಎಂದಿದ್ದಾರೆ.

ನಿಯಮದಲ್ಲಿ 5 ಬದಲಾವಣೆ ಸೂಚಿಸಿದ ಅಮೆರಿಕ ಕುಸ್ತಿಪಟು
ವಿನೇಶ್‌ ಅವರ ಅನರ್ಹತೆ ಬಳಿಕ ಕುಸ್ತಿಯ ನಿಯಮಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಕುಸ್ತಿಪಟು ಜೋರ್ಡಾನ್‌ ಬರೋ 5 ಸಲಹೆಗಳನ್ನು ನೀಡಿದ್ದಾರೆ. 2ನೇ ದಿನ ತೂಕ ಪರೀಕ್ಷೆ ಮಾಡುವಾಗ 1 ಕೆ.ಜಿ.ವರೆಗೆ ವಿನಾಯಿತಿ ನೀಡಬೇಕು. ಬೆಳಗ್ಗೆ 8.30ಕ್ಕೆ ತೂಕ ಪರೀಕ್ಷೆ ಮಾಡುವ ಬದಲು 10.30ಕ್ಕೆ ಮುಂದೂಡಬೇಕು, ಮುಂದಿನ ದಿನಗಳಲ್ಲಿ ಒಬ್ಬ ಸ್ಪರ್ಧಿ ತೂಕ ತಪ್ಪಿಸಿಕೊಂಡರೆ ಪಂದ್ಯ ರದ್ದು ಮಾಡ ಬೇಕು. ಫೈನಲ್‌ ತಲುಪಿದ ಸ್ಪರ್ಧಿಗಳು ಪದಕ ಗಳಿಸಿಕೊಂಡಿರುತ್ತಾರೆ. ಹೀಗಾಗಿ ಪದಕ ನೀಡಬೇಕು. ವಿನೇಶ್‌ಗೆ ಬೆಳ್ಳಿ ಪದಕ ನೀಡಬೇಕು ಎಂದು ಸೂಚಿಸಿದ್ದಾರೆ.

ಗೆದ್ದೆ ಎಂದೇ ಸಂಭ್ರಮಿಸಿದ್ದೆ: ಚಿನ್ನ ಗೆದ್ದ ಹಿಲ್ಡ್‌ಬ್ರಾಂಟ್‌
ಫೈನಲ್‌ಗ‌ೂ ಮುನ್ನ ವಿನೇಶ್‌ ಪೋಗಾಟ್‌ ತೂಕ ಪರೀಕ್ಷೆಯಲ್ಲಿ ವಿಫ‌ಲವಾದಾಗ ನಾನು ಚಿನ್ನ ಗೆದ್ದೆ ಎಂದು ಸಂಭ್ರಮಪಟ್ಟಿದ್ದೆ. ಬಳಿಕ ಕ್ಯೂಬಾ ಸ್ಪರ್ಧಿ ವಿರುದ್ಧ ಫೈನಲ್‌ ಪಂದ್ಯ ಆಡಬೇಕು ಎಂಬುದು ಗೊತ್ತಾಯಿತು. ಇದೆಲ್ಲ ಜ್ವರದಲ್ಲಿ ಬಿದ್ದ ಕನಸಿನಂತಿತ್ತು ಎಂದು 50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಅಮೆರಿಕದ ಕುಸ್ತಿಪಟು ಸಾರಾ ಆ್ಯನ್‌ ಹಿಲ್ಡ್‌ಬ್ರಾಂಟ್‌ ಹೇಳಿದ್ದಾರೆ. ಇದೇ ವೇಳೆ ವಿನೇಶ್‌ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ನಾನು ತೂಕ ಇಳಿಸಿಕೊಂಡಿದ್ದೆ. ಅದರ ಕಷ್ಟ ನನಗೆ ಗೊತ್ತಾಗುತ್ತದೆ. ವಿನೇಶ್‌ ಉತ್ತಮ ಕುಸ್ತಿಪಟು, ಈ ರೀತಿಯಾಗಿ ಅವರ ಒಲಿಂಪಿಕ್ಸ್‌ ಮುಕ್ತಾಯವಾಗಬಾರದಿತ್ತು ಎಂದು ಹೇಳಿದ್ದಾರೆ.

ನೀವು ಸೋತಿಲ್ಲ, ಸೋಲಿಸಲಾಗಿದೆ: ಬಜರಂಗ್‌
ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್‌ರನ್ನು ಸಂತೈಸಿರುವ ಕುಸ್ತಿಪಟು ಬಜರಂಗ್‌ ಪುನಿಯ, ನೀವು ಸೋತಿಲ್ಲ. ನಿಮ್ಮನ್ನು ಸೋಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ನಮ್ಮ ಪಾಲಿಗೆ ನೀವು ಎಂದೆಂದಿಗೂ ಚಾಂಪಿಯನ್‌ ಆಗಿದ್ದೀರಿ. ಭಾರತದ ಪುತ್ರಿಯಾಗಿರುವ ನೀವು ನಮ್ಮ ದೇಶದ ಹೆಮ್ಮೆ. ನಿಮ್ಮಂತಹ ಮಗಳನ್ನು ದೇವರು ಪ್ರತಿ ಮನೆಗೂ ನೀಡಲಿ. ನೀವು ಎಂದೆಂದಿಗೂ ಕುಸ್ತಿಯ ದಿಗ್ಗಜೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.