Advertisement

ವಿನಯ್‌ಗೆ ಬಿಜೆಪಿ ಕಂಡರೆ ಹೊಟ್ಟೆಯುರಿ

03:19 PM Jun 19, 2017 | Team Udayavani |

ಧಾರವಾಡ: ರಸ್ತೆ ಕಾಮಗಾರಿಗೆ ಭೂಮಿಪೂಜೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತೋರಿದ ವರ್ತನೆಯಿಂದ ಸಭ್ಯ, ಸುಸಂಸ್ಕೃತ ಜಿಲ್ಲೆ ಇಡೀ ರಾಜ್ಯದಲ್ಲೇ ತಲೆ ತಗ್ಗಿಸುವಂತಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಜುಬಿಲಿ ವೃತ್ತದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿನಯ ಕುಲಕರ್ಣಿ ಅವರು ಒಬ್ಬ ಸಚಿವರಾಗಿ, ಕೇಂದ್ರ ಸಚಿವರು ಹಾಗೂ ಒಬ್ಬ ಮಾಜಿ ಮುಖ್ಯಮಂತ್ರಿ ಇದ್ದ ವೇದಿಕೆಯಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದು ತೀರಾ ನಾಚಿಕೆಗೇಡಿನ ವಿಷಯ. ಅಲ್ಲದೇ, ಕಾರ್ಯಕ್ರಮದ ನಿರೂಪಕನಿಗೂ ಮನ ಬಂದಂತೆ ಬೈದು, ಸ್ಥಳದಲ್ಲಿದ್ದ ದಲಿತ ಹುಡುಗನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು. 

ವಿನಯ್‌ಗೆ ಹೊಟ್ಟೆಯುರಿ: ವಿನಯ ಕುಲಕರ್ಣಿ ಸೇರಿದಂತೆ ರಾಜ್ಯ ಸರಕಾರ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಬಗ್ಗೆ ಸಂಪೂರ್ಣ ಅಸಹಕಾರ ನೀಡುತ್ತಿದೆ. ಹೀಗಾಗಿ ನಾವು ಆಸಕ್ತಿ ವಹಿಸಿ ಅವಳಿ ನಗರಕ್ಕೆ ಉತ್ತಮ ರಸ್ತೆಗಳಾಗಲಿ ಎಂಬುದಕ್ಕಾಗಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ತರುತ್ತಿದ್ದೇವೆ. ಇದನ್ನು ವಿನಯ ಕುಲಕರ್ಣಿ ಅವರಿಗೆ  ಸಹಿಸಿಕೊಳ್ಳಲು ಆಗುತ್ತಿಲ್ಲ.

ಅವರ ಘನತೆಗೆ ಚ್ಯುತಿ ಬರುವಂತೆ ಅವರೇ ನಡೆದುಕೊಳ್ಳುತ್ತಿದ್ದಾರೆ ಎಂದರು. ಹುಬ್ಬಳ್ಳಿ-ಧಾರವಾಡದಲ್ಲಿ ಶನಿವಾರ ಕೇಂದ್ರ ಸರಕಾರದ ಅನುದಾನದಲ್ಲಿ ಆರಂಭವಾದ ವಿವಿಧ ಕಾಮಗಾರಿಗಳಿಗೆ ನಾವು ಶ್ರಮಿಸಿದ್ದೇವೆ ಎಂಬುದಾಗಿ ಸಚಿವರು ಹೇಳುತ್ತಿದ್ದಾರೆ. ಅವರು ನಿಜವಾಗಲೂ ಈ ಕಾಮಗಾರಿಗಳಿಗೆ ಶ್ರಮಿಸಿದ್ದರೆ ಅದಕ್ಕೆ ಸಂಬಂಧಿಸಿದ ಒಂದೇ ಒಂದು ದಾಖಲೆಗಳನ್ನು ನೀಡಲಿ ಎಂದು ಬೆಲ್ಲದ ಸವಾಲು ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next