ಉಡುಪಿ : ಕಾರ್ಕಳ ಪ್ರಾರ್ಥನಾ ಮಂದಿರ ದಾಳಿ ರಾಜ್ಯದಲ್ಲಿ ಸರಕಾರ ಹಾಗೂ ಕಾನೂನು ವ್ಯವಸ್ಥೆ ಸರಿಯಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಿಡಿಕಾರಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಾಂತರ ನಡೆಯುತ್ತಿದೆ ಅಂತ ಆರೋಪಿಸಿ ಹಿಂದೂ ಜಾಗರಣ ವೇದಿಕೆ ಪ್ರಾರ್ಥನಾಲಯಕ್ಕೆ ದಾಳಿ ಖಂಡನೀಯ. ಘಟನೆಯಲ್ಲಿ ನಿಯಮಾ ಉಲ್ಲಂಘನೆಯಾಗಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ರಾಜ್ಯದಲ್ಲಿ ಅವರದ್ದೇ ಸರಕಾರ ಇದೆ. ಉಸ್ತುವಾರಿ ಸಚಿವರು ಕೂಡ ಕಾರ್ಕಳದವರೇ. ಆದರೂ ಈ ರೀತಿಯಲ್ಲಿ ಏಕಾಏಕಿ ದಾಳಿ ಮಾಡುವುದು ಸರಿಯಲ್ಲ. ವಾಸ್ತವವಾಗಿ ಘಟನೆಯ ಬಗ್ಗೆ ವಿಮರ್ಶೆ ಮಾಡಬೇಕಿತ್ತು. ಪತ್ರಿಕೆಯಲ್ಲಿ ಪ್ರಾರ್ಥನೆಗೆ ಸೇರಿದ್ದಾರೆ ಅಂತ ಉಲ್ಲೇಖ ಆಗಿದೆ. ಎಲ್ಲ ಕಡೆ ಈ ರೀತಿ ಆದರೆ ಯಾಕೆ ಕಾನೂನು, ಯಾಕೆ ಉಸ್ತುವಾರಿ ಸಚಿವರು? ಎಂದು ಮಾಜಿ ಸಚಿವ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ :ಈ ತಿಂಗಳ ಅಂತ್ಯಕ್ಕೆ ಭಾರತೀಯ ಖಾತೆದಾರರ ವಿವರ ಲಭ್ಯ : ಸ್ವಿಸ್ ಬ್ಯಾಂಕ್
ಮೈಸೂರಿನಲ್ಲಿ ದೇವಾಲಯಗಳ ಬಗ್ಗೆ ಒಡೆಯಲು ಚಿಂತನೆ ನಡೆಸುತ್ತಿರುವ ಬಗ್ಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಿಜೆಪಿಯವರು ದೇವಸ್ಥಾನ ಹುಡಿ ಮಾಡಿದರೆ ಅದು ದೊಡ್ಡ ವಿಷಯವೇ ಅಲ್ಲ. ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ಧರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಮೂಢ ನಂಬಿಕೆ ಬಿಲ್ ಜಾರಿಗೊಳಿಸುತ್ತೇನೆ ಎಂದಾಗ ಬಿಜೆಪಿ ದೊಡ್ಡ ಅಪಪ್ರಚಾರ ಮಾಡಿತ್ತು. ದೇಗುಲದ ಗಂಟೆ ಬಾರಿಸುವುದಕ್ಕೆ ಇಲ್ಲ, ಭೂತಾರಾಧನೆ ನಿಲ್ಲತ್ತೆ, ತುಳಸಿ ಕಟ್ಟೆ ತೆಗೆಯುತ್ತಾರೆ ಅಂತ ಅಪಪ್ರಚಾರ ಮಾಡಿದರು. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಅವಧಿಯಲ್ಲಿ ಅದೇ ಮಸೂದೆಯನ್ನು ಅಕ್ಷರ ಕೂಡ ಬದಲಾವಣೆ ಮಾಡದೆ ಜಾರಿಗೊಳಿಸಿದ್ದಾರೆ. ಬಿಜೆಪಿಯವರು ಯಾವುದೇ ಕೆಲಸ ಮಾಡಿದರೂ ಯಾವುದೇ ಆತಂಕ ಇಲ್ಲ. ನಾವೆಲ್ಲರೂ ಹಿಂದುತ್ವದ ಬಗ್ಗೆ ಅವರಲ್ಲಿ ಅನುಮತಿ ತೆಗೆದುಕೊಳ್ಳಬೇಕು. ಮುಂದಿನ ದಿನ ಇಂತಹ ಕಾನೂನು ಬಂದರೂ ಬರಬಹುದು. ಭಕ್ತರ ನಂಬಿಕೆಯನ್ನು ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ದೇವಸ್ಥಾನ ಕೆಡವುದು ಸರಿ ಅಲ್ಲ ಎಂದರು.