ವಿನಯ್ ರಾಜಕುಮಾರ್ ಅಭಿನಯದ ಚಿತ್ರವೊಂದನ್ನು ರಘುವರ್ಧನ್ ನಿರ್ದೇಶನ ಮಾಡಲಿದ್ದು, ಆ ಚಿತ್ರಕ್ಕೆ “ವೀರ ಕೇಸರಿ’ ಎಂಬ ಶೀರ್ಷಿಕೆ ಇಡಲಾಗಿದೆ ಎಂದು ಈ ಹಿಂದೆ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಶೀರ್ಷಿಕೆ ಅದಲ್ಲ ಎಂಬುದು ಹೊಸ ಸುದ್ದಿ. ಹೌದು, ಆ ಚಿತ್ರದ ಹೆಸರು “ವೀರ ಕೇಸರಿ’ ಅಲ್ಲ, “ಯುವ ಕೇಸರಿ’. ಸ್ಕ್ರಿಪ್ಟ್ ಕೆಲಸ ಮುಗಿಸಿದ್ದ ನಿರ್ದೇಶಕರು, “ಯುವ ಕೇಸರಿ’ ಎಂಬ ಹೆಸರಿಡಲು ಯೋಚಿಸಿದ್ದರು.
ಆದರೆ, ಅದು “ವೀರ ಕೇಸರಿ’ ಅಂತ ಸುದ್ದಿಯಾಗಿತ್ತು. ಆದರೆ, ಆ ಶೀರ್ಷಿಕೆ ಇಟ್ಟಿಲ್ಲ. ಬದಲಾಗಿ “ಯುವ ಕೇಸರಿ’ ಶೀರ್ಷಿಕೆ ಇಟ್ಟಿದ್ದಾಗಿ ಹೇಳುತ್ತಾರೆ ನಿರ್ದೇಶಕ ರಘುವರ್ಧನ್. ನಿರ್ದೇಶಕ ರಘುವರ್ಧನ್ ಅವರಿಗೆ ಇದು ಐದನೇ ಚಿತ್ರ. “ಮಿಸ್ಟರ್ ಎಲ್‌ಎಲ್‌ಬಿ’ ಬಳಿಕ ನಿರ್ದೇಶಿಸುತ್ತಿರುವ ಚಿತ್ರವಿದು. “ಯುವ ಕೇಸರಿ’ ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಪಕ್ಕಾ ಯೂಥ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ.
ಇದೊಂದು ಪಕ್ಕಾ ಆ್ಯಕ್ಷನ್ ಕಮ್ ಲವ್‌ಸ್ಟೋರಿ ಹೊಂದಿರುವ ಸಿನಿಮಾ ಎನ್ನುವ ನಿರ್ದೇಶಕ ರಘುವರ್ಧನ್, “ಆ್ಯಕ್ಷನ್ ಜೊತೆಯಲ್ಲಿ ಫ್ಯಾಮಿಲಿ ವಿಷಯವೂ ಇರಲಿದೆ. ವಿನಯ್ ರಾಜಕುಮಾರ್ ಅವರಿಗೆ ಇದು ಮಾಸ್ ಸಿನಿಮಾ ಆಗಲಿದ್ದು, ರಗಡ್ ಲುಕ್‌ನಲ್ಲೇ ಅವರಿಲ್ಲಿ ಮಿಂಚಲಿದ್ದಾರೆ. ಮಾಸ್ ಅಂಶವಗಳು ಸಿನಿಮಾದ ಹೈಲೈಟ್. ವಿನಯ್ ಅವರಿಗೆ ಹೊಸ ಬಗೆಯ ಕಥೆ, ಪಾತ್ರ ಇರಲಿದ್ದು, ಅವರ ಲುಕ್ ಬಹುತೇಕ ಬದಲಾಗಲಿದೆ’ ಎನ್ನುತ್ತಾರೆ.
ಇನ್ನು, ಇದೊಂದು ಹ್ಯೂಮನ್ ರೈಟ್ಸ್ ಮೇಲೆ ನಡೆಯುವ ಕಥೆ. ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆರ್.ವಿ.ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ದೇಶಕ ರಘುವರ್ಧನ್ ಅವರೇ ಚಿತ್ರ ನಿರ್ಮಿಸುತ್ತಿದ್ದಾರೆ. ವಸಂತ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ನಿರ್ದೇಶಕರು ಕಥೆ, ಚಿತ್ರಕಥೆ ಬರೆದಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯಾ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕವಿರಾಜ್ ಎಲ್ಲಾ ಹಾಡುಗಳಿಗೂ ಗೀತೆ ಬರೆದಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವಿದೆ. ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲ್ಲಿ “ಯುವ ಕೇಸರಿ’ಗೆ ಚಾಲನೆ ಸಿಗಲಿದೆ ಎಂಬುದು ನಿರ್ದೇಶಕರ ಮಾತು.