Advertisement

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

10:44 AM Aug 30, 2024 | Team Udayavani |

ಇಷ್ಟು ದಿನ ಕ್ಲಾಸ್‌ ಸಿನಿಮಾಗಳ ಮೂಲಕ ಸಾಫ್ಟ್ಬಾಯ್‌ ಎನಿಸಿಕೊಂಡಿದ್ದ ವಿನಯ್‌ ರಾಜ್‌ಕುಮಾರ್‌ (Vinay Rajkumar) ಈಗ ಮೈ ತುಂಬಾ ರಕ್ತ ಮೆತ್ತಿಕೊಂಡಿದ್ದಾರೆ. ಜೊತೆಗೆ ಹೊಸದೇನೋ ಮಾಡಿದ ಖುಷಿ ಅವರಲ್ಲಿದೆ. ಜನ “ಪೆಪೆ’ (Pepe) ಎಂದು ಕೂಗಿ ಖುಷಿಪಡುವ ವಿಶ್ವಾಸವಿದೆ.

Advertisement

ಹೌದು, ವಿನಯ್‌ ನಟನೆಯ “ಪೆಪೆ’ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಾಯಕಿ. ಚಿತ್ರವನ್ನು ಶ್ರೀಲೇಶ್‌ಎಸ್‌ ನಾಯರ್‌ ನಿರ್ದೇಶನ ಮಾಡಿದ್ದಾರೆ. ಉದಯ್‌ ಶಂಕರ್‌.ಎಸ್‌ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್‌ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಬಗ್ಗೆ ವಿನಯ್‌ ಮನಬಿಚ್ಚಿ ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ.

“ಪೆಪೆ’ ಎರಡೂವರೆ ವರ್ಷಗಳ ಪಯಣ ಇದು. ನಮ್ಮ ಪ್ರೀತಿ, ಶ್ರಮ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ನನ್ನ ಹೆಸರು ಪ್ರದೀಪ ಅಂತ. ಎಲ್ಲರೂ ಪೆಪೆ ಅಂತ ಕರೀತಾರೆ. ಅದೊಬ್ಬ ಫುಟ್ಬಾಲ್‌ ಆಟಗಾರನ ಹೆಸರು. ಅವರಿಂದ ಸ್ಫೂರ್ತಿಪಡೆದು ನಿರ್ದೇಶಕರು ಹೆಸರು ಇಟ್ಟಿರಬಹುದು. ನಮ್ಮಲ್ಲಿ ಕ್ರಿಕೆಟ್‌ ಕ್ರೇಜ್‌ ಇದ್ದಂತೆ, ಕೇರಳದಲ್ಲಿ ಪುಟ್ಬಾಲ್‌ ಕ್ರೇಜ್‌ ಇದೆ. ಈಗಾಗಲೇ ಟ್ರೇಲರ್‌ ರಿಲೀಸ್‌ ಆಗಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಚಿತ್ರದ ಬಗ್ಗೆ ಜನರಲ್ಲಿ ಒಂದಿಷ್ಟು ನಿರೀಕ್ಷೆ ಇದೆ.

ಈಗಾಗಲೇ ಲವರ್‌ಬಾಯ್‌ ಪಾತ್ರದಲ್ಲಿ ಕಾಣಿಸಿಕೊಂಡ ನನಗೆ ಈ ಚಿತ್ರ ತುಂಬಾ ಹೊಸದು. ಈ ಶೈಲಿಗೆ ಒಪ್ಪಿಕೊಳ್ಳಲು ಕಾರಣ ಕಥೆ. ಕೆಲವು ಕಥೆಗಳನ್ನು ಹೂಗಳ ಮೂಲಕ ಹೇಳಬೇಕು. ಕೆಲವು ಕಥೆಗಳನ್ನು ಮಚ್ಚು ಮೂಲಕ ಹೇಳಬೇಕು. ಈ ಕಥೆಗೆ ಮಚ್ಚು ಬೇಕಿತ್ತು. ಹಾಗಾಗಿ, ಆ ಶೈಲಿಯಲ್ಲಿ ಹೇಳಿದ್ದೇವೆ. ನಾನೊಬ್ಬ ನಟನಾಗಿ ನನಗೆ ಪ್ರತಿ ಚಿತ್ರವೂ ಇಷ್ಟ. ಒಬ್ಬ ನಟನಾಗಿ ಎಲ್ಲಾ ಶೈಲಿಯ ಚಿತ್ರಗಳನ್ನೂ ಮಾಡಬೇಕು.

ಇದುವರೆಗೂ ನಾನು ಈ ತರಹದ ಚಿತ್ರ ಮಾಡಿರಲಿಲ್ಲ. ಇದು ನನಗೆ ಹೊಸ ಅನುಭವ. 10 ವರ್ಷದಿಂದ ಈ ತರಹ ಪಾತ್ರ ಮಾಡಿರಲಿಲ್ಲ. ಹಾಗಾಗಿ ಖುಷಿಯಾಯಿತು. ಒಬ್ಬ ನಟನಾಗಿ ಆ್ಯಕ್ಷನ್‌ ಚಿತ್ರದಲ್ಲಿ ನಟಿಸಬೇಕು ಎಂದು ಮೊದಲಿನಿಂದಲೂ ಆಸೆ ಇತ್ತು. ಇಲ್ಲಿ ಆ್ಯಕ್ಷನ್‌ ಜೊತೆಗೆ ಒಂದಿಷ್ಟು ವಿಷಯಗಳಿವೆ. ಹಾಗಾಗಿ, ಕಥೆ ಕೇಳಿ ತಕ್ಷಣವೇ ಒಪ್ಪಿಕೊಂಡೆ.

Advertisement

ಸಿನಿಮಾದಲ್ಲಿ ನಿರ್ದೇಶಕರು ಹಲವು ವಿಚಾರಗಳನ್ನು ಹೇಳಿದ್ದಾರೆ. ಮುಖ್ಯವಾಗಿ ಇಲ್ಲಿ ಸೇಡು ಇದೆ. ಹಾಗಂತ ಇದು ಸಂಪೂರ್ಣ ಸೇಡಿನ ಕಥೆ ಅಂತ ಹೇಳ್ಳೋದು ಕಷ್ಟ. ಕೆಲವು ದಿನಗಳ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ “ಪೆಪೆ’ ಚಿತ್ರದ ಕುಟುಂಬಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡೆವು. ಬದ್ನಾಳ್‌ ಎಂಬ ಒಂದು ಕಾಲ್ಪನಿಕ ಊರಲ್ಲಿ ನಾಲ್ಕು ಕುಟುಂಬಗಳ ನಡುವಿನ ಹೋರಾಟದ ಕಥೆ ಇದು. ಈ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಜನರಿಗೆ ಮೊದಲೇ ಪರಿಚಯವಾಗಲೀ ಎಂದು ಫ್ಯಾಮಿಲಿ ಟ್ರೀ ಮತ್ತು ಪಾತ್ರಗಳ ನಡುವಿನ ಸಂಬಂಧ ಬಿಟ್ಟಿದ್ದೇವೆ. ಅದು ಗೊತ್ತಾದಾಗ, ಸಿನಿಮಾ ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ.

ಇದು ನಮ್ಮ ಸಂಸ್ಕೃತಿಗೆ ತುಂಬಾ ಹತ್ತಿರವಾದ ಸಿನಿಮಾ. ಕುಟುಂಬದ ಗೌರವ ಉಳಿಸಿಕೊಳ್ಳುವುದಕ್ಕೆ ಏನೆಲ್ಲಾ ಒತ್ತಡಗಳಿರುತ್ತವೆ ಎಂದು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರದಲ್ಲಿ ನಾಲ್ಕು ಕುಟುಂಬಗಳ ನಡುವಿನ ಹೋರಾಟದ ಕಥೆ ತೋರಿಸಿದ್ದೇವೆ. ಪ್ರತೀ ಪಾತ್ರಕ್ಕೂ ಅದರದ್ದೇ ಹೋರಾಟ ಇರುತ್ತದೆ. ಯಾವ ದೃಷ್ಟಿಕೋನದಿಂದ ಚಿತ್ರ ನೋಡುತ್ತೀರಾ ಎನ್ನುವುದು ಬಹಳ ಮುಖ್ಯ.

ನಾನು ಈ ಚಿತ್ರ ನೋಡಿ ಹೊರಬಂದಾಗ ಒಂದು ಮೌನ ನನ್ನನ್ನು ಕಾಡಿತು. ಆ ತರಹ ಪ್ರತಿಯೊಬ್ಬರಿಗೆ ಇದು ಒಳ್ಳೆಯ ಅನುಭವ ಕೊಡುವ ಸಿನಿಮಾ ಆಗಲಿದೆ ಎಂಬ ವಿಶ್ವಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next