Advertisement

ಎಲ್ಲೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೊರಕೆ ಭೇಟಿ : ಸ್ಥಳೀಯರ ಮಧ್ಯೆ ಮಾತಿನ ಚಕಮಕಿ

04:39 PM May 24, 2022 | Team Udayavani |

ಪಡುಬಿದ್ರಿ : ಬಡಾ ಗ್ರಾಮ ಉಚ್ಚಿಲ, ಎರ್ಮಾಳು, ಪಡುಬಿದ್ರಿಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕಾಪು ಪುರಸಭೆಯು ಎಲ್ಲೂರು ಗ್ರಾ. ಪಂ. ವ್ಯಾಪ್ತಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಿದ್ದ ನಿಯೋಗವೊಂದು ಸೋಮವಾರ ಭೇಟಿ ಇಟ್ಟಿತ್ತು. ಈ ನಡುವೆ ಎಲ್ಲೂರು ಗ್ರಾ. ಪಂ. ಸದಸ್ಯರೂ, ಸ್ಥಳೀಯರೂ ಅಲ್ಲಿದ್ದು ಭೇಟಿಯ ಅಂತ್ಯದಲ್ಲಿ ಸೊರಕೆ ಕೋಪೋದ್ರಿಕ್ತರಾದ ಹಾಗೂ ಮಾತಿನ ಚಕಮಕಿ, ನೂಕಾಟ, ತಲ್ಲಾಟಗಳು ಎಲ್ಲೂರಿನಲ್ಲಿ ಘಟಿಸಿದವು.

Advertisement

ಸ್ಥಳೀಯರ ಅಹವಾಲುಗಳನ್ನು ಸೊರಕೆ ಅವರು ಆಲಿಸಿ ಅಲ್ಲಿಂದ ನಿರ್ಗಮಿಸುವವರಿದ್ದಾಗಲೇ ಸ್ಥಳೀಯರು, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಲ್ಲಾಟಗಳಾದವು. ಪರಿಸ್ಥಿತಿಯನ್ನು ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಹಾಗೂ ಸಿಬಂದಿಗಳು ನಿಯಂತ್ರಿಸಿದರು.

ಎಲ್ಲೂರು ಗ್ರಾ. ಪಂ. ನ ಸದಸ್ಯರಾದ ಶೋಭಾ ಶೆಟ್ಟಿ, ಹರೀಶ್ ಮೂಲ್ಯ, ದಯಾನಂದ ಶೆಟ್ಟಿ, ಹಿರಿಯರಾದ ಕುಟ್ಟಿ ಶೆಟ್ಟಿ, ರೇಶ್ಮಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ಶೇಖರ್ ಶೆಟ್ಟಿ ಸಹಿತ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಗಮಿಸಿ ಸೊರಕೆ ಅವರೊಂದಿಗೆ ಮಾತಿಗಿಳಿದಿದ್ದರು. ಎಲ್ಲೂರು ಅಲ್ಲದೇ ಇತರೇ ಬಾಹ್ಯ ಗ್ರಾಮಗಳ ತ್ಯಾಜ್ಯಗಳನ್ನು ಎಲ್ಲೂರಿಗೆ ಸಾಗಿಸಿಕೊಳ್ಳುವ ಉದ್ದೇಶಗಳೇನಿದ್ದರೂ ಅದು ಫಲಿಸದು ಎಂದು ಇವರೆಲ್ಲರೂ ವಿವರಿಸಿದ್ದರು. ಈ ಘಟಕದಿಂದ ಈಗಾಗಲೇ ಸ್ಥಳೀಯರು ತೊಂದರೆಗಳನ್ನು ಅನುಭವಿಸುತ್ತಿರುವರು. ಸೊಳ್ಳೆ ಕಾಟ ವಿಪರೀತವಾಗಿದೆ. ಈಗಾಗಲೇ ಬೃಹತ್ ಯೋಜನೆಯಿಂದಾಗಿ ಬಾವಿ ನೀರು ಕುಡಿಯಲೂ ಅಯೋಗ್ಯವೆನಿಸಿದೆ. ಪರಿಸರವು ಈ ಎಲ್ಲಾ ಯೋಜನೆಗಳಿಂದ ಕುಲಗೆಟ್ಟಿದ್ದು ಇಲ್ಲಿ ಕಾಪು, ಎಲ್ಲೂರು ಗ್ರಾಮಗಳಲ್ಲದೇ ಬೇರೆ ಗ್ರಾಮಗಳ ತ್ಯಾಜ್ಯವನ್ನು ತರುವಂತಿಲ್ಲ ಎಂದು ಸ್ಥಳೀಯರು ಪುನರುಚ್ಚರಿಸಿದರು.

ಇದನ್ನೂ ಓದಿ : ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

Advertisement

ಸಮಸ್ಯೆಗಳನ್ನು ಸಮಾಧಾನಚಿತ್ತದಿಂದಲೇ ಆಲಿಸಿ, ಉತ್ತರಿಸಿದ ಮಾಜಿ ಸಚಿವ ಸೊರಕೆ ತಾನು ಕಾಪು ಪುರಸಭೆಯ ತ್ಯಾಜ್ಯ ವಿಲೇವಾರಿಗಾಗಿ ಇಂತಹಾ ಒಂದು ಘಟಕಕ್ಕೆ ಜಾಗನೀಡಿ ಎಂದು ಅಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆ. ಆದರೆ ಎಲ್ಲೂರಲ್ಲೇ ನೀಡಿ ಎಂದು ತಾನಂದಿಲ್ಲ. ಕೋರ್ಟ್ ತಡೆಯಾಜ್ಞೆ, ತೆರವುಗಳ ಬಳಿಕ ಆರಂಭಗೊಂಡಿದ್ದ 5 ಕೋಟಿ ರೂ. ಗಳ ಈ ಘಟಕದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಅಗತ್ಯವಿರುವ ಮಿಶನರಿಗಳನ್ನು ಅಳವಡಿಸಬೇಕಿದೆ. ಆ ಮೂಲಕ ತಾಜ್ಯವನ್ನು ಗೊಬ್ಬರವನ್ನಾಗಿ ಮಾರ್ಪಡಿಸಿ ಸಂಪನ್ಮೂಲದ ಕ್ರೋಢೀಕರಣಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಹಾಗಾಗಿ ಜಿಲ್ಲಾಡಳಿತ, ಅಧಿಕಾರಯುಕ್ತ ಶಾಸಕ, ಸಂಸದರ ಸಹಿತ ಜನಪ್ರತಿನಿಧಿಗಳು, ಕಾಪು ಪುರಸಭೆಯ ಅಧಿಕಾರಿ ವರ್ಗವೂ ಈ ನಿಟ್ಟಿನಲ್ಲಿ ನಿಷ್ಕ್ರೀಯವಾಗಿದೆ. ಆದ್ದರಿಂದ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಇದನ್ನು ಪ್ರತಿಭಟಿಸದೇ ಬೇರೆ ದಾರಿ ಇಲ್ಲ. ಎಲ್ಲೂರು ಘಟಕದಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಲಷ್ಟೇ ಇಂದು ಇಲ್ಲಿಗೆ ಬಂದಿರುವುದಾಗಿ ಹೇಳಿದರು.

ಘಟಕಕ್ಕೆ ಭೇಟಿ ನೀಡಿ ಹೊರ ಬರುವ ಸಂದರ್ಭದಲ್ಲಿ ಎಲ್ಲೂರು ಗ್ರಾ. ಪಂ ಸದಸ್ಯೆ ಶೋಭಾ ಶೆಟ್ಟಿ ಅವರೊಂದಿಗೆ ಕಾಂಗ್ರೆಸ್ ನಿಯೋಗದಲ್ಲಿದ್ದ ಮಹಿಳೆಯರು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸ್ಥಳೀಯರಾದ ಹೇಮಂತ್ ಶೆಟ್ಟಿ ಮಧ್ಯೆ ಪ್ರವೇಶಿಸಿದಾಗ ನೂಕಾಟ, ತಲ್ಲಾಟದ ಸಹಿತ ಸೊರಕೆ ಕೋಪಗೊಂಡ ಘಟನೆಯು ನಡೆದಿದೆ. ಸ್ಥಳೀಯ ಹಿರಿಯ ಮಹಿಳೆ ಶರ್ಮಿಳಾ ಶೆಟ್ಟಿ ಅವರು ತಾನು ಸವಿವರವಾದ ಇ ಮೇಲ್ ಅನ್ನು ವಿನಯ ಕುಮಾರ್ ಸೊರಕೆ ಅವರಿಗೆ ರವಾನಿಸುವುದಾಗಿಯೂ, ಮುಖತಃ ಅವರೊಂದಿಗೆ ಸಮಸ್ಯೆಯ ಆಳ ಮತ್ತು ಗಂಭೀರತೆಯ ಬಗೆಗೆ ಚರ್ಚಿಸುವುದಾಗಿಯೂ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next