Advertisement

ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಬೇಲ್, ಸದ್ಯ ಬಿಡುಗಡೆ ಇಲ್ಲ

02:00 PM Aug 11, 2021 | Team Udayavani |

ನವದೆಹಲಿ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಬುಧವಾರ (ಆಗಸ್ಟ್ 11) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೂ ಕುಲಕರ್ಣಿಗೆ ಸದ್ಯ ಜೈಲಿನಿಂದ ಬಿಡುಗಡೆ ಇಲ್ಲ ಎಂದು ವರದಿ ವಿವರಿಸಿದೆ.

Advertisement

ಇದನ್ನೂ ಓದಿ:ಒಬ್ಬ ಫೀಲ್ಡರ್ ಕೂಡಾ ಒಂದು ಪಂದ್ಯದ ಚಿತ್ರಣ ಬದಲಾಯಿಸಬಲ್ಲ ಎಂದು ತೋರಿಸಿಕೊಟ್ಟಿದ್ದ ರೋಡ್ಸ್!

ಯೋಗಿಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕಳೆದ 9 ತಿಂಗಳಿನಿಂದ ಜೈಲಿನಲ್ಲಿದ್ದು, ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಭೇಟಿ ನೀಡದಂತೆ ಷರತ್ತು ವಿಧಿಸಿ ಜಾಮೀನು ನೀಡಿದೆ ಎಂದು ವರದಿ ತಿಳಿಸಿದೆ.

ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಯನ್ನು ಸಿಬಿಐ 2020ರ ನವೆಂಬರ್ 5ರಂದು ಸಿಬಿಐ ಬಂಧಿಸಿತ್ತು. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿ ಯೋಗೀಶ್ ಗೌಡ ಮಾಲೀಕತ್ವದ ಜಿಮ್ ಬಳಿ ಯೋಗೀಶ್ ಗೌಡ ಹತ್ಯೆ ನಡೆದಿತ್ತು.

ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಸದ್ಯ ಬಿಡುಗಡೆ ಇಲ್ಲ:

ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದರೂ ಕೂಡಾ ಜೈಲಿನಿಂದ ಹೊರಬರಲಾರದ ಸ್ಥಿತಿ ಎದುರಾಗಿದೆ. ಕುಲಕರ್ಣಿ ಮೇಲೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಾಕ್ಷ್ಯ ನಾಶದ ಪ್ರಕರಣದ ಅರ್ಜಿ ವಿಚಾರಣಾ ಹಂತದಲ್ಲಿದೆ. ಅಲ್ಲದೇ ಇತ್ತೀಚೆಗಷ್ಟೇ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಏತನ್ಮಧ್ಯೆ ಜಾಮೀನಿಗಾಗಿ ಕುಲಕರ್ಣಿ ಹೈಕೋರ್ಟ್ ಮೊರೆಹೋಗಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿರುವುದರಿಂದ ಸುಪ್ರೀಂಕೋರ್ಟ್ ಜಾಮೀನು ನೀಡಿದರೂ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಇಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next