ನೆಲಮಂಗಲ: ನಕಲಿ ದಾಖಲೆ ಸೃಷ್ಟಿಸಿ ಮೂರ್‍ನಾಲ್ಕು ಕೋಟಿ ಬೆಲೆ ಬಾಳುವ ಸ್ಮಶಾನ ಜಾಗವನ್ನು ಕಬಳಿಕೆ ಮಾಡಿದ್ದಾರೆ ಎಂದು ಟಿ.ಬೇಗೂರು ಗ್ರಾಪಂ ಕಚೇರಿ ಎದುರು ಅಣಕು ಶವಯಾತ್ರೆ ಮಾಡಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಮಾತ್ರ ಜಿಲ್ಲಾಧಿಕಾರಿ ಗ್ರಾಮಕ್ಕೆ ನೀಡಿದ್ದ ಸರ್ವೆ ನಂ. 247ರ 2.20 ಎಕರೆ ಜಮೀನುನಲ್ಲಿ 1.10 ಎಕರೆ ಜಾಗವನ್ನು 307, 308, 309ರ ಸರ್ವೆ ನಂಬರ್‌ಗೆ ಸೇರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದಾರೆ. ಟಿ.ಬೇಗೂರಿನ ಪಿಡಿಒ ಈ ಜಾಗಕ್ಕೆ ಇ-ಖಾತೆ ನೀಡಿದ್ದು, ಅಧಿಕಾರಿಗಳ ವೈಫಲ್ಯ ಹಾಗೂ ಭ್ರಷ್ಟಾಚಾರಕ್ಕೆ ಸ್ಮಶಾನ ಜಾಗ ಬಲಿಯಾಗಿದೆ. ನಮಗೆ ನ್ಯಾಯ ಸಿಗುವವರೆಗೂ ಗ್ರಾಪಂ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದುಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಒ ಹಣ ಪಡೆದ ಆರೋಪ: ಟಿ.ಬೇಗೂರು ಗ್ರಾಪಂನ ಪಿಡಿಒ ಉಷಾ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಪ್ರಭಾಕರ್ ಭಟ್ ಹೆಸರು ಹೇಳಿಕೊಂಡು ಧಮ್ಕಿ ಹಾಕುತ್ತಿದ್ದಾರೆ. ಸಮಯಕ್ಕೆ ಸರಿ ಯಾಗಿ ಕಚೇರಿಗೆ ಬರುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೆ, ಹಣ ಪಡೆದು ಸ್ಮಶಾನದ ಜಾಗಕ್ಕೆ ಇ-ಖಾತೆ ಮಾಡಿದ್ದು, ಪ್ರಶ್ನೆ ಮಾಡಿದರೆ ಪ್ರಭಾವಿಗಳ ಒತ್ತಡವಿತ್ತು ಮಾಡಿದ್ದೇನೆ ಎಂದು ಬೇಜಾವಬ್ದಾರಿ ಉತ್ತರ ನೀಡುತ್ತಿದ್ದಾರೆ. ಇಂತಹ ಪಿಡಿಒ ಅವರನ್ನು ಅಮಾ ನತು ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಣುಕು ಶವಯಾತ್ರೆ: ಸ್ಮಶಾನ ಜಾಗವನ್ನು ಕಬಳಿಕೆ ಮಾಡಲು ಕೆಲ ಗ್ರಾಪಂ ಸದಸ್ಯರು, ತಾಪಂ ಮಾಜಿ ಸದಸ್ಯರು, ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು, ಭೂಮಾಪನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದು, ಇವರು ನಮ್ಮ ಗ್ರಾಮದ ಪಾಲಿಗೆ ಸತ್ತಿದ್ದಾರೆ. ಮೇಲಾಧಿಕಾರಿಗಳು ನ್ಯಾಯ ನೀಡ ಬೇಕು ಎಂದು ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಅಣುಕು ಶವಯಾತ್ರೆ ಮಾಡಿದರು.
ತಹಶೀಲ್ದಾರ್ ಭೇಟಿ, ಭರವಸೆ: ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಂಜು ನಾಥ್ ಸರ್ವೆ ಮಾಡಿ ಸ್ಮಶಾನ ಜಾಗವನ್ನು ಸರ್ಕಾರದ ವ್ಯಾಪ್ತಿಗೆ ತರುವುದು ನಮ್ಮ ಹೊಣೆ. ಮುಂದಿನ ತಿಂಗಳು ಸ್ಥಳದ ಸರ್ವೆ ನಡೆಸಿ ದಾಖಲಾತಿ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿ ಸ್ಮಶಾನ ಜಾಗದ ಸ್ಥಳ ಪರಿಶೀಲನೆ ಮಾಡಿದರು.
ಉಗ್ರ ಹೋರಾಟ: ಭರವಸೆಯಂತೆ ನಮ್ಮ ಗ್ರಾಮದ ಸ್ಮಶಾನ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುತ್ತದೆ. ಹೆದ್ದಾರಿಯಲ್ಲಿ ಕುಳಿತು ಅಹೋರಾತ್ರಿ ಧರಣಿ ಮಾಡಲು ಸಿದ್ದರಿದ್ದೇವೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಗೌಡ, ಮುಖಂಡ ಶ್ರೀನಿವಾಸ್, ಬಾಲಾಜಿಗೌಡ ಎಚ್ಚರಿಕೆ ನೀಡಿದ್ದಾರೆ.
ಇಒ ಮೋಹನ್‌ಕುಮಾರ್, ಪಿಡಿಒ ಉಷಾ, ಸ್ಥಳೀಯ ಮುಖಂಡ ಬಾಲಾಜಿಗೌಡ, ಮಲ್ಲಯ್ಯ, ನಾರಾಯಣಗೌಡ, ಕರಿವರ ದಯ್ಯ, ಪ್ರಕಾಶ್, ಸಿದ್ದಲಿಂಗಯ್ಯ, ರಮೇಶ್, ಪರಮೇಶ್, ಹನುಮಯ್ಯ, ಬೈರೇಗೌಡ, ನಾರಾಯಣಗೌಡ, ತಿಮ್ಮಾರಸಯ್ಯ, ಕೆಂಪರಾಜು ಮತ್ತಿತರರು ಇದ್ದರು.