ರಾಣಿಬೆನ್ನೂರ: ಅಕ್ರಮವಾಗಿ ಮರಳು ಮತ್ತು ಇಟ್ಟಂಗಿ ಬಟ್ಟಿಗೆ ಮಣ್ಣು ಹೇರಿಕೊಂಡು ನೂರಾರು ಲಾರಿ ಮತ್ತು ಟ್ರ್ಯಾಕ್ಟರ್ಗಳು ಗ್ರಾಮದಲ್ಲಿ ಸಂಚರಿಸುವುದರಿಂದ ಮಕ್ಕಳ ಹಾಗೂ ವೃದ್ಧರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತಕ್ಷಣ ಸಂಚಾರ ನಿಲ್ಲಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಮಾಕನೂರ ಗ್ರಾಮಸ್ಥರು ಬುಧವಾರ ದನಕರುಗಳ ಜೊತೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ
ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ಅಕ್ರಮವಾಗಿ ಮರಳು ಮತ್ತು ಇಟ್ಟಂಗಿ ಬಟ್ಟಿಗೆ ಮಣ್ಣು ಹೇರಿಕೊಂಡು ನೂರಾರು ಲಾರಿ ಮತ್ತು ಟ್ರ್ಯಾಕ್ಟರ್ಗಳು ಗ್ರಾಮದಲ್ಲಿ ಸಂಚರಿಸುವುದರಿಂದ ಜನರ ಮತ್ತು ಮಕ್ಕಳು ಹಾಗೂ ವೃದ್ಧರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನೆಯಾಗಿಲ್ಲ. ಇದರಲ್ಲಿ ಅವರು ಶಾಮೀಲಾಗಿದ್ದಾರೆ ಎಂದು
ದೂರಿದರು.
ಬೆಳಗಾಯಿತೆಂದರೆ ಗ್ರಾಮದಲ್ಲಿ ನೂರಾರು ಲಾರಿ ಮತ್ತು ಟ್ರ್ಯಾಕ್ಟರ್ಗಳು ಸಂಚರಿಸುವುದರಿಂದ ಮಕ್ಕಳನ್ನು ಮನೆಯರು ಹೊರಗಡೆ ಬಿಡದೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ವೃದ್ಧರಂತೂ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗುತ್ತದೆ.
ಇದನ್ನೂ ಓದಿ:ಪತಿ ಒತ್ತೆಯಾಳು…. ಪತ್ನಿ ಮೇಲೆ 17 ಮಂದಿಯಿಂದ ಅತ್ಯಾಚಾರ; ಶೀಘ್ರ ತನಿಖೆಗೆ ಆಯೋಗ ಒತ್ತಾಯ
ಟ್ರ್ಯಾಕ್ಟರ್‌ಗಳು ಮಣ್ಣು ಹೇರಿಕೊಂಡು ಹೋಗುವಾಗ ರಸ್ತೆಯಲ್ಲಿ ಮಣ್ಣು ಚೆಲ್ಲಿ ಇವುಗಳ ಓಡಾಟದಿಂದ ಧೂಳ್ಳೋ ಧೂಳು ಕಣ್ಣು ತೆರದು ಸಂಚರಿಸುವಂತಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹುಚ್ಚಪ್ಪ ಹಲಗೇರಿ, ಮಲ್ಲಿಕಾರ್ಜುನ ಭರಮಗೌಡ್ರ, ಹನುಮಂತಪ್ಪ ಆರೇರ, ನಾಗನಗೌಡ ಮುದಿಗೌಡ್ರ, ಶಂಕರಗೌಡ
ಭರಮಗೌಡ್ರ, ರಮೇಶ ಹಲಗೇರಿ, ಚಂದ್ರಗೌಡ ಭರಮಗೌಡ್ರ, ಬಸವರಾಜ ಹಲಗೇರಿ, ಸಣ್ಣಗೌಡ ಮುದಿಗೌಡ್ರ, ನರೇಂದ್ರ ನಾಯಕ, ರಾಜು ಬಾತಿ ಸೇರಿದಂತೆ ಇತರರು ಇದ್ದರು.