ಯಳಂದೂರು: ಮಳೆಯಿಂದಾಗಿ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರು ಈ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ತಾಲೂಕಿನ ಕೊಮಾರನಪುರ ಗ್ರಾಮದ ದಲಿತರ ಬಡಾವಣೆಯಲ್ಲಿಸೋಮವಾರ ಸಾರ್ವಜನಿಕರು ವಿಭಿನ್ನವಾಗಿ ಪ್ರತಿಭಟಿಸಿ, ಗಮನ ಸೆಳೆದರು.
1.20 ಕೋಟಿರೂ.ಯೋಜನೆ: ಲೋಕೋಪಯೋಗಿ ಇಲಾಖೆಯಿಂದ 2019ರ ಆ.28 ರಂದು ಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆಯಡಿ 1.20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್. ಮಹೇಶ್ ಚಾಲನೆ ನೀಡಿದ್ದರು. ಆದರೆ, ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಅಗಲೀಕರಣಕ್ಕೆ 9 ತಿಂಗಳ ಹಿಂದೆಯೇ ಮಣ್ಣನ್ನು ತೋಡಲಾಗಿದೆ.
ಈ ಗುಂಡಿಗಳಲ್ಲಿ ಮಳೆ ನೀರು ತುಂಬಿ ಕೊಂಡು ರಸ್ತೆಗಳು ಕೆಸರಿನಿಂದ ಕೂಡಿವೆ. ಅಲ್ಲದೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. ಮಣ್ಣಿನ ಗೋಡೆಗಳ ಮನೆಗಳು ಶಿಥಿಲ ಗೊಂಡಿದ್ದು, ಕುಸಿಯುವ ಹಂತದಲ್ಲಿವೆ. ಇಲ್ಲಿ ಮಹಿಳೆಯರು, ಮಕ್ಕಳು ಬಿದ್ದು ಗಾಯ ಗೊಂಡಿರುವ ನಿದರ್ಶನ ಗಳೂ ಇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕಾಮಗಾರಿಯನ್ನೂ ಆರಂಭಿಸಿಲ್ಲ. ರಸ್ತೆಯತುಂಬೆಲ್ಲಾ ಕೆಸರು ನಿಂತಿದೆ. ಶೀಘ್ರ ದಲ್ಲೇ ಕಾಮಗಾರಿಯನ್ನು ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮದ ವೆಂಕಟ ರಾಜು, ಸಿದ್ದರಾಜು, ಚೆನ್ನಪ್ಪ, ಸುರೇಶ್, ಎಂ. ಶಿವಕುಮಾರ್, ರೇವಣ್ಣ, ರುದ್ರಯ್ಯ,ಪುಟ್ಟಸ್ವಾಮಿ, ರಂಗಸ್ವಾಮಿ, ಪುಟ್ಟರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಮಿಕರಿಲ್ಲದ್ದಕ್ಕೆ ವಿಳಂಬ : ಕೊಮಾರನಪುರದ ದಲಿತರ ಬಡಾವಣೆಯಲ್ಲಿ ಕಾಮಗಾರಿಗೆ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ತಲಾ 60 ಲಕ್ಷ ರೂ.ನಂತೆ ಒಟ್ಟು 1.20 ಕೋಟಿ ರೂ. ಬಿಡು ಗಡೆಯಾಗಿದೆ. ಇದರಲ್ಲಿ ಟಿಎಸ್‌ಪಿ ಕಾಮಗಾರಿ ಪೂರ್ಣಗೊಂಡಿದೆ.ಕೊರೊನಾ ಹಿನ್ನೆಲೆಯಲ್ಲಿಕಾರ್ಮಿಕರಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಬೇಗ ಎಸ್‌ಇಪಿ ವ್ಯಾಪ್ತಿಗೆ ಒಳಪಡುವ ಈ ಬಡಾವಣೆಯ ಕಾಮಗಾರಿಯನ್ನುಪೂರ್ಣಗೊಳಿಸಲಾಗುವುದು ಎಂದುಲೋಕೋಪಯೋಗಿ ಇಲಾಖೆ ಜೆಇ ಸುರೇಂದ್ರ ಭರವಸೆ ನೀಡಿದ್ದಾರೆ.