ತರೀಕೆರೆ: ಅಧಿಕಾರಿಗಳು, ಜನಪ್ರತಿನಿಧಿ ಗಳು ಜನಸಾಮಾನ್ಯರ ಕೆಲಸಗಳನ್ನು ನಿರ್ಲಕ್ಷಿಸಿದರೆ ಜನರು ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ. ಹಲವಾರು ವರ್ಷಗಳಿಂದ ದುರಸ್ತಿ ಕಾಣದ ರಸ್ತೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ರಸ್ತೆ ಅಭಿವೃದ್ಧಿ ಮಾತ್ರ ಕಾಣಲಿಲ್ಲ. ವಾಹನಗಳು, ಜನಸಾಮಾನ್ಯರು, ವಿದ್ಯಾರ್ಥಿಗಳು ಸಂಚರಿಸಲು ಯೋಗ್ಯವಿಲ್ಲದ ರಸ್ತೆಯನ್ನು ಕಂಡು ಬೇಸತ್ತ ಗ್ರಾಮಸ್ಥರು ತಾವೇ ಹಣ ಹಾಕಿ ರಸ್ತೆಯನ್ನು ದುರಸ್ತಿ ಮಾಡಿಕೊಂಡ ಘಟನೆ ಲಿಂಗದಹಳ್ಳಿ ಹೋಬಳಿಯ ಕಲ್ಲತ್ತಿಪುರ – ಲಾಲ್‌ಭಾಗ್ ರಸ್ತೆಯಲ್ಲಿ ನಡೆದಿದೆ.
ಗ್ರಾಮಸ್ಥರು ಮನಸ್ಸು ಮಾಡಿದರೆ ಏನನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ಕಲ್ಲತ್ತಿಪುರ, ಲಾಲ್‌ಬಾಗ್, ಪಿ.ಡಬ್ಲೂ.ಡಿ. ರಸ್ತೆ ದುರಸ್ತಿಯೇ ಸಾಕ್ಷಿ. ರಸ್ತೆ ಅಭಿವೃದ್ಧಿ ಕಾರ್ಯವನ್ನು ದೂಪದಖಾನ್ ಗ್ರಾಮದಿಂದ ಮಸ್ಕಲ್‌ವುರಡಿ ಗ್ರಾಮದ ತನಕ ರಸ್ತೆಯಲ್ಲಿ ವಾಹನಗಳು ಜನರು ಸಂಚರಿಸಲು ಯೋಗ್ಯವಿಲ್ಲದ ಕಾರಣ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಆರ್ಥಿಕ ಸಂಪನ್ಮೂಲ ಸಂಗ್ರಹಿಸಿ ಶ್ರಮದಾನ ಮಾಡುವ ಮೂಲಕ ರಸ್ತೆಯಲ್ಲಿದ್ದ ಗುಂಡಿ- ಗೊಟರುಗಳಿಗೆ ತಾತ್ಕಾಲಿಕವಾಗಿ ಗ್ರಾವೆಲ್ ಹಾಕಿ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.
ಕಲತ್ತಿಪುರ- ಲಾಲ್‌ಬಾಗ್ 25 ಕಿ.ಮೀ ಉದ್ದದ ರಸ್ತೆ ಲೋಕೋಪಯೋಗಿ ಇಲಾಖಾ ರಸ್ತೆ ಎಂಬುದು ದಾಖಲೆಗಳಲ್ಲಷ್ಟೇ ಇದ್ದು ಈ ರಸ್ತೆಯಲ್ಲಿ ಇರುವ ಬಳ್ಳಾವರದಿಂದ ರೂಪ್‌ಲೈನ್ ಗ್ರಾಮದವರೆಗಿನ 6 ಕಿಮೀ ರಸ್ತೆ ಮತ್ತು ದೂಪದಖಾನ್ ಗ್ರಾಮದಿಂದ ಮಸ್ಕಲ್ ಮರಡಿಯವರೆಗಿನ 7 ಕಿಮೀ ರಸ್ತೆ ಕಳೆದ ಅನೇಕ ವರ್ಷಗಳಿಂದ ದುರಸ್ತಿ ಕಾಣದೆ ಇರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿ ಗೊಟರುಗಳಾಗಿದ್ದು, ದ್ವಿಚಕ್ರ ವಾಹನ ಕಾರು, ಜೀಪು, ಲಾರಿ, ಬಸ್ಸು ಮುಂತಾದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು.
ನರಸಿಂಹರಾಜಪುರ ತಾಲೂಕಿನ ವ್ಯಾಪ್ತಿಗೆ ಬರುವ ದಂಡುಬಿಟ್ಟಹಾರ, ನಂದಿಗಾವೆ, ತರೀಕೆರೆ ತಾಲೂಕಿನ ದೂಪದಖಾನ್, ವರ್ತೆಗುಂಡಿ, ತಣಿಗೆಬೈಲು, ಮಸ್ಕಲ್‌ವುರಡಿ, ಕುರುಕನಮಟ್ಟಿ, ಸಂಪಿಗೆಖಾನ್, ಲಾಲ್‌ಬಾಗ್, ಕತ್ಲೇಖಾನ್ ಇನ್ನಿತರ ಗ್ರಾಮಗಳು ಮತ್ತು ಕಾಫಿ ತೋಟಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ, ದೈನಂದಿನ ಕೆಲಸಗಳಿಗೆ ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು, ಜನರು ಈ ರಸ್ತೆಯ ಮೂಲಕವೇ ಸಂಚರಿಸಬೇಕಾಗಿದೆ.
ರಸ್ತೆ ಅಭಿವೃದ್ಧಿಯಾಗಿದ್ದು 30 ವರ್ಷಗಳ ಹಿಂದೆ ಇದನ್ನು ದುರಸ್ತಿ ಮಾಡಿಕೊಡುವಂತೆ ಅನೇಕ ಬಾರಿ ಶಾಸಕರು, ಜಿಪಂ ಹಾಗೂ ತಾಪಂ ಸದಸ್ಯರಿಗೆ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದುವರೆಗೂ ಸಹ ಯಾರೊಬ್ಬರೂ ಇತ್ತ ಗಮನಹರಿಸಿಲ್ಲ, ರಸ್ತೆ ತುಂಬ ಗುಂಡಿಗಳೇ ಇರುವ ಗ್ರಾಮಗಳಿಗೆ ಸಂಚರಿಸುತ್ತಿದ್ದ ಬಸ್‌ಗಳು ಬಾರದೆ ಗ್ರಾಮಸ್ಥರು 10-15 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗಿದ ಅನಿವಾರ್ಯ ಉಂಟಾಗಿತ್ತು. ಗರ್ಭಿಣಿಯರು, ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿ ರುವವರು ಆಸ್ಪತ್ರೆಗೆ ಹೋಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ವಾಹನ ಸಂಚಾರವಿಲ್ಲದೇ ಇರುವುದರಿಂದ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡು ತರುವ ಗ್ರಾಮಸ್ಥರು ಹತ್ತಾರು ಮೈಲಿಗಳಷ್ಟು ದೂರ ಕಾಲ್ನಡಿಗೆಯಿಂದಲೇ ಹೋಗಿ ತಲೆಯ ಮೇಲೆ ಸಾಮಗ್ರಿಗಳನ್ನು ಹೊತ್ತು ತರಬೇಕಾಗಿದ್ದುದರಿಂದ ಬೇಸತ್ತ ಗ್ರಾಮಸ್ಥರೆಲ್ಲರೂ ಒಗ್ಗೂಡಿ ತೀರ್ಮಾನಿಸಿದಂತೆ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು ನಿದ್ರಿಸುತ್ತಿರುವಂತೆ ನಟಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಬೇಕೆಂದು ಗ್ರಾಮಸ್ಥರಾದ ಪ್ರೀತಮ್, ಅಯ್ಯಣ್ಣ ಇನ್ನಿತರರು ಒತ್ತಾಯಿಸಿದ್ದಾರೆ.
ಈ ಭಾಗದ ಗ್ರಾಮಗಳ ಸುತ್ತಮುತ್ತ ಕಾಫಿ ಎಸ್ಟೇಟ್, ಭದ್ರಾ ಅಭಯಾರಣ್ಯ, ಅರಣ್ಯಗಳ ಆಸುಪಾಸಿನಲ್ಲಿದ್ದು ವನ್ಯಮೃಗಗಳು ಹಗಲು ಹೊತ್ತಿನಲ್ಲಿಯೇ ರಸ್ತೆ ಬದಿಯಲ್ಲಿ ಸಂಚರಿಸುತ್ತವೆ. ರಸ್ತೆ ಸರಿ ಇಲ್ಲದಿದ್ದರಿಂದ ಕಾಲ್ನಡಿಗೆಯಲ್ಲಿಯೇ ಸಂಚಾರ ಮಾಡುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಮೇಲೆ ಅನೇಕ ಬಾರಿ ಕಾಡುಪ್ರಾಣಿಗಳು ದಾಳಿ ಮಾಡುವದರಿಂದ ಗ್ರಾಮಸ್ಥರು ಜೀವ ಭಯದಿಂದಲೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
–ಬಿ.ಎಂ.ಚಾಲುಕ್ಯ, ದಂಡುಬಿಟ್ಟಹಾರದ ಗ್ರಾಮಸ್ಥ
ದೂಪದಖಾನ್ ಗ್ರಾಮದಿಂದ ಮಸ್ಕಲ್‌ವುರಡಿ ರಸ್ತೆ ಗುಡ್ಡಗಾಡು ಪ್ರದೇಶದಲ್ಲಿದ್ದು, ರಸ್ತೆ ಬದಿಗಳಲ್ಲಿ ಹೇರಳವಾಗಿ ಕಾಡು ಮರಗಳಿವೆ. ಮಳೆಗಾಲದಲ್ಲಿ ಮರಗಳ ಮೇಲೆ ಬೀಳುವ ಮಳೆಯ ನೀರು ರಸ್ತೆಗೆ ತೊಟ್ಟಿಕ್ಕುತ್ತಿರುವುದರಿಂದ ರಸ್ತೆಯಲ್ಲಿ ಗುಂಡಿಗಳಾಗಿದ್ದು, ರಸ್ತೆಯ ಗುಂಡಿಗಳನ್ನು ಮುಚ್ಚುವುದು ಸಾಧ್ಯವಿಲ್ಲದ ಕಾರಣ ಸಂಪೂರ್ಣ ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅನುದಾನ ಬಂದರೆ ಮುಂದಿನ ವರ್ಷಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
–ವಾಗೀಶ್, ಎ.ಇ.ಇ., ಪಿ.ಡಬ್ಲೂ.ಡಿ. ತರೀಕೆರೆ