ಮುಂಗೇರ್: ಬಿಹಾರದ ಮುಂಗೇರ್ ಜಿಲ್ಲೆಯಲ್ಲಿರುವ ಸೊಂಧಿಯಾ ತಂತಿ ತೋಲಾ ಗ್ರಾಮದಲ್ಲಿರುವ ತಾರಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಭತ್ಸ ಘಟನೆಯೊಂದರಲ್ಲಿ ಒಂದೂವರೆ ವರ್ಷದ ಮಗುವೊಂದು ಗ್ರಾಮದ ಸಮೀಪದ ಹೊಲದಲ್ಲಿ ಹೊಟ್ಟೆ ಬಗೆಯಲ್ಪಟ್ಟ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಗುವಿನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಗ್ರಾಮಸ್ಥರು ನೋಡುವ ಸಂದರ್ಭದಲ್ಲಿ ಮಗುವಿನ ಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ ಮಗುವಿನ ಹೃದಯ, ಕರುಳು ಮತ್ತು ಲಿವರ್ ಭಾಗ ಹೊರಗೆ ಕಾಣುವಂತಿತ್ತು. ಈ ಮಗುವನ್ನು ಆಶೀಶ್ ಕುಮಾರ್ ಎಂದು ಗುರುತಿಸಲಾಗಿದ್ದು ಮಗುವಿನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ತನ್ನ ಮನೆಯಿಂದ ಕೇವಲ ನೂರು ಮೀಟರ್ ಗಳ ಅಂತರದಲ್ಲಿ ಮಗು ಈ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಗ್ರಾಮದಲ್ಲಿ ಭೀತಿಯ ವಾತಾವರಣಕ್ಕೆ ಕಾರಣವಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಕಂಡ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯ ಭಾಗಕ್ಕೆ ಹೊಲಿಗೆ ಹಾಕಿದ್ದಾರೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಭಾಗಲ್ಪುರದ ಆಸ್ಪತ್ರೆಗೆ ಕರೆದೊಯ್ಯುವಂತೆಯೂ ವೈದ್ಯರು ಶಿಫಾರಸು ಮಾಡಿದ್ದಾರೆ.
ಮಗುವಿನ ತಾಯಿ ರೇಖಾ ದೇವಿ ಹೇಳುವ ಪ್ರಕಾರ ಆಕೆಯ ಮಗು ಮನೆಯ ಹೊರಗಡೆ ಆಟವಾಡಿಕೊಂಡಿತ್ತು ಮತ್ತು ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯರ ಕಿರುಚಾಟ ಕೇಳಿ ತಾಯಿ ಮನೆಯಿಂದ ಹೊರಗೆ ಬಂದು ನೋಡಿದಾಗ ಆಕೆಯ ಕಂದ ಮನೆ ಸಮೀಪದ ಗದ್ದೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ಈ ಬೀಭತ್ಸ ಕೃತ್ಯವನ್ನು ಮಕ್ಕಳ ಕಳ್ಳರು ನಡೆಸಿರುವ ಸಾಧ್ಯತೆಯನ್ನು ಗ್ರಾಮಸ್ಥರು ಶಂಕಿಸಿದ್ದಾರೆ.
ಮಗುವಿನ ಹೆತ್ತವರು ಹೇಳುವ ಪ್ರಕಾರ ಅವರಿಗೆ ಗ್ರಾಮದಲ್ಲಿ ಯಾರೊಂದಿಗೂ ವೈರತ್ವ ಇರಲಿಲ್ಲ ಆದರೂ ಈ ರೀತಿಯಾಗಿ ಪುಟ್ಟ ಮಗುವಿನೊಂದಿಗೆ ಅಮಾನುಷವಾಗಿ ವರ್ತಿಸಿರುವವರು ಯಾರೆಂಬುದೇ ಇದೀಗ ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ.
ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಎಫ್.ಐ.ಆರ್. ಒಂದನ್ನು ದಾಖಲಿಸಿಕೊಂಡಿದ್ದಾರೆ.