ಹೊನ್ನಾವರ: ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆ ವಿರುದ್ಧ ತಾಲೂಕಿನ ಮೂಡ್ಕಣಿ, ಅಳ್ಳಂಕಿ, ಹೆರಂಗಡಿ, ಗುಡ್ಡೆಕೇರಿ, ಉಪ್ಪೋಣಿ ಭಾಗದ ನೂರಾರು ಜನರು ಗೇರುಸೊಪ್ಪ ಗ್ರೀಡ್‌ಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಸದ ಪರಿಣಾಮ ಜನರು ರೋಸಿ ಹೋಗಿದ್ದರು. ಇದರಿಂದ ಬೇಸತ್ತ ನಿವಾಸಿಗಳು ಗೇರುಸೊಪ್ಪ ಗ್ರೀಡ್‌ಗೆ ಭೇಟಿ ನೀಡಿ ಕರೆಂಟ್ ಕಣ್ಣಾಮುಚ್ಚಾಲೆ ಬಗ್ಗೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಎಡಬ್ಲುಇ ಶಂಕರ ಗೌಡ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಿಮ್ಮ ಸಮಸ್ಯೆಯನ್ನು 10 ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆದರು.
ನಗರಬಸ್ತಿಕೇರಿ ಗ್ರಾಪಂ ಸದಸ್ಯ ಮಂಜುನಾಥ ನಾಯ್ಕ ಮಾತನಾಡಿ, ಹೊಸದಾಗಿ ಮಂಜೂರಿಯಾದ ವಿದ್ಯುತ್ ಮಾರ್ಗ ಕೆಲಸ ನಡೆಯುವಾಗ ನಿಮ್ಮ ಇಲಾಖೆಯವರು ಯಾರೂ ಹೋಗುವುದಿಲ್ಲ. ಹೀಗಾಗಿ ಹಳೆ ಕಂಬ-ಹಳೆ ತಂತಿಯನ್ನೇ ಅಳವಡಿಸಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಹಾಗೂ ಜೋಗದಿಂದ ಬರುವ ವಿದ್ಯುತ್ ಕಂಬ-ತಂತಿಯನ್ನು ಸರಿಪಡಿಸಿ ಎಂದು ಆಗ್ರಹಿಸಿದರು.
ಹೆರಂಗಡಿ ಗ್ರಾಪಂ ಸದಸ್ಯ ಚಂದ್ರಕಾಂತ ಕೊಚರೆಕರ ಮಾತನಾಡಿ, ಲೈನ್‌ಮೆನ್ ಆನಂದರಾವ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಉದ್ದಟತನದಿಂದ ಮಾತನಾಡುತ್ತಾರೆ. ಅವರ ಪರವಾಗಿ ಬದಲಿ ವ್ಯವಸ್ಥೆ ಮಾಡಿ. ಸಮರ್ಪಕವಾದ ವಿದ್ಯುತ್ ಒದಗಿಸಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ವಿನಾಯಕ ನಾಯ್ಕ ಮಾತನಾಡಿ, ಇಲಾಖೆಯವರಿಂದ ಜಂಗಲ್ ಕಟಿಂಗ್ ಗುತ್ತಿಗೆ ಪಡೆದ ಗುತ್ತಿಗೆದಾರರಿಂದ ಇಲ್ಲಿಯವರೆಗೆ ಎಲ್ಲಿಯೂ ಜಂಗಲ್ ಕಟಿಂಗ್ ಆಗಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಮೌನವೇಕೆ ಎಂದು ಪ್ರಶ್ನಿಸಿದರು.
ಗಣೇಶ ಹಳ್ಳೇರ, ಖಾಜಾ ಹೆರಂಗಡಿ, ಶ್ರೀಧರ ನಾಯ್ಕ ಗುಡ್ಡೇಕೇರಿ, ಜಾಫರ್, ಶೇಖರ ನಾಯ್ಕ ಮೂಡ್ಕಣಿ, ಜುವಾಂವ್ ಅಳ್ಳಂಕಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.