Advertisement

ರಸ್ತೆ ದುರಸ್ತಿಗೆ ಗ್ರಾಮಸ್ತರ ಒತ್ತಾಯ

05:52 PM Jun 11, 2022 | Team Udayavani |

ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ತೆರಳಲು ಈ ಹಿಂದೆ ಬಳಕೆಯಲಿದ್ದ ಹಳೆ ಡ್ಯಾಮ್‌ ರಸ್ತೆಯೂ ಸೂಕ್ತ ನಿರ್ವಹಣೆ ಇಲ್ಲದೇ ಸಂಪೂರ್ಣ ಹದಗೆಟ್ಟಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

Advertisement

ನಾರಾಯಣಪುರದಿಂದ ಬೃಹತ್‌ ನೀರಾವರಿ ಯೋಜನೆಯಾಗಿರುವ ಬಸವಸಾಗರ ಜಲಾಶಯಕ್ಕೆ ಅಂದಾಜು 5 ಕಿ.ಮೀ. ದೂರ ಇದ್ದು, ದಶಕಗಳ ಹಿಂದೆ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಈ ರಸ್ತೆಯೇ ಮುಖ್ಯ ಸಂಪರ್ಕ ಮಾರ್ಗವಾಗಿತ್ತು. ಈ ಹಿಂದಿನ ಹಲವು ಸಂದರ್ಭದಲ್ಲಿ ಹಳೆ ಡ್ಯಾಮ್‌ ರಸ್ತೆಯ ನಿರ್ವಹಣೆ ಬಗ್ಗೆ ಕಾಳಜಿ ವಹಿಸಿದ್ದ ಕೃಷ್ಣಾ ಭಾಗ್ಯ ಜಲ ನಿಗಮವೂ ಸದ್ಯ ಈ ರಸ್ತೆ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈಗ ಚೆಕ್‌ಪೋಸ್ಟ್‌ ಮಾರ್ಗವಾಗಿ ಬಸವಸಾಗರ ಜಲಾಶಯಕ್ಕೆ ಪರ್ಯಾಯ ರಸ್ತೆ ಇರುವುದರಿಂದ, ಈ ಹಳೆ ಡ್ಯಾಮ್‌ ರಸ್ತೆಯೂ ಸಂಪೂರ್ಣ ನಿರ್ಲಕ್ಷ್ಯಕೊಳಗಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ಸಂಪೂರ್ಣ ರಸ್ತೆ ಹದಗೆಟ್ಟು ಹೋಗಿದ್ದು, ಅಲ್ಲಲ್ಲಿ ದೊಡ್ಡ ಗಾತ್ರದ ತಗ್ಗು ಗುಂಡಿಗಳಿರುವುದು ಒಂದೆಡೆಯಾದರೆ, ರಸ್ತೆ ಬದಿಗಳಲ್ಲಿ ದಟ್ಟವಾಗಿ ಬೆಳೆದ ಮುಳ್ಳು ಕಂಟಿ ರಸ್ತೆಯನ್ನು ಇಕ್ಕಟ್ಟಾಗಿಸಿವೆ. ಕೆಲ ಸಂದರ್ಭಗಳಲ್ಲಿ ಬೈಕ್‌ ಸವಾರರೂ ರಸ್ತೆ ಮೇಲಿನ ತಗ್ಗು ದಿನ್ನೆಗಳನ್ನು ತಪ್ಪಿಸಲು ಹೋಗಿ ಆಯಾ ತಪ್ಪಿ ಬಿದ್ದು ಗಾಯಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಂಬಂಧಪಟ್ಟ ಇಲಾಖೆಯವರು ಹಳೆ ಡ್ಯಾಮ್‌ ರಸ್ತೆ ದುರಸ್ತಿಗೊಳಿಸುವುದರ ಜೊತೆಗೆ ದಟ್ಟವಾಗಿ ಬೆಳೆದಿರುವ ಮುಳ್ಳು ಕಂಠಿಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next