ಭೋಪಾಲ್(ಮಧ್ಯಪ್ರದೇಶ): ಅನಾರೋಗ್ಯ ಪೀಡಿತ ಚಿರತೆಗೆ ಕಿರುಕುಳ ನೀಡಿ, ಅದರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಟ್ಟಹಾಸಗೈದಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಇಕ್ಲೇರಾ ಗ್ರಾಮದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Chess ಆಟವನ್ನು ಅನೇಕರು ಗುರುತಿಸುತ್ತಿರುವುದು ಸಂತೋಷ ತಂದಿದೆ: ಪ್ರಜ್ಞಾನಂದ
ಲಭ್ಯವಾದ ಮಾಹಿತಿ ಪ್ರಕಾರ, ಇಕ್ಲೇರಾ ಸಮೀಪದ ಅರಣ್ಯದ ಸುತ್ತಮುತ್ತ ತಿರುಗಾಡುತ್ತಿದ್ದ ಚಿರತೆಯನ್ನು ಗ್ರಾಮಸ್ಥರು ಗಮನಿಸಿದ್ದರು. ಆರಂಭದಲ್ಲಿ ಚಿರತೆಯನ್ನು ಕಂಡು ಜನರು ಹೆದರಿದ್ದರು. ಆದರೆ ಚಿರತೆ ಆಕ್ರಮಣಕಾರಿ ನಿಲುವಿನ ಬದಲು ಅನಾರೋಗ್ಯದಿಂದ ಬಳಲುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು.
ಅಷ್ಟರಲ್ಲಿ ಸ್ಥಳೀಯರು ಚಿರತೆಗೆ ಕಿರುಕುಳ ನೀಡಲು ಆರಂಭಿಸಿದ್ದರು. ಘಟನೆ ಬಗ್ಗೆ ವ್ಯಕ್ತಿಯೊಬ್ಬರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಸ್ಥಳೀಯರು ಚಿರತೆ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಎಳೆದಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ ವ್ಯಕ್ತಿಯೊಬ್ಬ ಚಿರತೆ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿರುವುದು ವೈರಲ್ ವಿಡಿಯೋದಲ್ಲಿದೆ.
ನಂತರ ಉಜ್ಜೈನ್ ನಿಂದ ಬಂದ ತಂಡ ಚಿರತೆಯನ್ನು ಇಕ್ಲೇರಾದಿಂದ ಸುರಕ್ಷಿತವಾಗಿ ಭೋಪಾಲ್ ನ ವನ ವಿಹಾರ್ ಪ್ರದೇಶಕ್ಕೆ ರವಾನಿಸಿದ್ದರು, ಅಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.