ಅಳ್ನಾವರ: ಸ್ಥಳದಲ್ಲೇ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮವಾಸ್ತವ್ಯ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೊನ್ನಾಪುರ ಗ್ರಾಪಂ ಅಧ್ಯಕ್ಷೆ ಕುತುಜಾ ಡೊನಸಾಲ ಹೇಳಿದರು.
ಗ್ರಾಮದಲ್ಲಿ ನಡೆದ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಹಳ್ಳಿ ಜನರಿಗೆ ಸಮಯಕ್ಕೆ ಸರಿಯಾಗಿ ಅಧಿ ಕಾರಿಗಳು ಸಿಗುವುದಿಲ್ಲ ಎಂಬ ದೂರು ದೂರವಾಗಿ ಸಮಸ್ಯೆಗಳಿಗೆ ಈ ಕಾರ್ಯಕ್ರಮದಿಂದ ಶೀಘ್ರ ಪರಿಹಾರ ದೊರೆಯಲಿದೆ. ಪಿಂಚಣಿ ಯೋಜನೆ ಸಾಕಷ್ಟು ಜನರಿಗೆ ಸಹಾಯ ಆಗಿದೆ ಎಂದರು.
ತಹಶೀಲ್ದಾರ್ ಅಮರೇಶ ಪಮ್ಮಾರ ಮಾತನಾಡಿ, 30 ಅರ್ಜಿಗಳು ಬಂದಿವೆ. ಅದರಲ್ಲಿ 6 ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಪಿಂಚಣಿ ಅರ್ಜಿಗೆ ಮಂಜೂರಾತಿ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ರಸ್ತೆ, ಚರಂಡಿ ನಿರ್ಮಾಣ ಮುಂತಾದ ಕಾರ್ಯಗಳನ್ನು ಗ್ರಾಪಂನವರು ನಿಭಾಯಿಸಬೇಕು ಎಂದು ಪಿಡಿಒ ಅವರಿಗೆ ನಿರ್ದೇಶನ ನೀಡಿದರು. ಕೃಷಿ, ಶಿಕ್ಷಣ, ತೋಟಗಾರಿಕೆ ಮುಂತಾದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಹೊನ್ನಾಪುರ ಹಾಗೂ ಕಲಕೇರಿ ಭಾಗದಲ್ಲಿ ಅರಣ್ಯ ಇಲಾಖೆಯವರು ಹೊಡೆದ ಟ್ರೆಂಚ್ ಕಾಮಗಾರಿಯಿಂದ ಪಕ್ಕದ ಹೊಲಗಳಿಗೆ ತೊಂದರೆ ಆಗಿದೆ ಎಂಬ ದೂರು ಕೇಳಿಬಂತು. ಗ್ರಾಮದ ಪ್ರತಿ ಮನೆಯ ನೀಲನಕ್ಷೆ ತಯಾರಿಸುವ ಕಾರ್ಯ ಸುಗಮವಾಗಿ ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ತಹಶೀಲ್ದಾರರು ಗ್ರಾಮ ಒನ್ ಕೇಂದ್ರ, ಶಾಲೆ, ಅಂಗನವಾಡಿ, ಪಡಿತರ ಅಂಗಡಿ ಹಾಗೂ ಎಸ್ಸಿ-ಎಸ್ಟಿ ಕಾಲೋನಿಗೆ ಭೇಟಿ ನೀಡಿದರು. ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ತಾಪಂ ಯೋಜನಾಧಿ ಕಾರಿ ಪ್ರಕಾಶ ಹಾಲಮತ್, ಗ್ರಾಪಂ ಉಪಾಧ್ಯಕ್ಷ ಫಾರೂಕ ಅಂಬಡಗಟ್ಟಿ, ಎಚ್.ಆರ್. ಸನದಿ, ಪಿಡಿಒ ರೇಣುಕಾ ಕೊಪ್ಪದ, ತೇಜಸ್ ದೊಡ್ಡಮನಿ, ಪರಪ್ಪ ನಾಯಕ, ಲಕ್ಷ್ಮಣ ಪತ್ತಾರ ಇನ್ನಿತರರಿದ್ದರು.