Advertisement

Village ಹಳ್ಳಿಗಳಲ್ಲಿ ಇನ್ನು ಡಿಜಿಟಲ್‌ ಅ ಆ ಇ ಈ

01:32 AM Sep 05, 2023 | Team Udayavani |

ಕೋಟ: ಅಕ್ಷರ ಜ್ಞಾನವಿಲ್ಲದವರನ್ನು ಗುರುತಿಸಿ ಅ ಆ ಇ ಈ … ಕಲಿಸಿ ಸಾಕ್ಷರರನ್ನಾಗಿಸುವ ಸಂಪೂರ್ಣ ಸಾಕ್ಷರತೆ ಆಂದೋಲನ ದಶಕಗಳ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ನಡೆದಿತ್ತು. ಪ್ರಸ್ತುತ ಅದೇ ಮಾದರಿಯಲ್ಲಿ ಮೊಬೈಲ್‌, ಇಂಟರ್‌ನೆಟ್‌ ಬಳಕೆ ಬಗ್ಗೆ ಜ್ಞಾನವಿಲ್ಲದವರನ್ನು ಗುರುತಿಸಿ ಸಾಕ್ಷರರನ್ನಾಗಿಸುವ ಸಂಪೂರ್ಣ “ಡಿಜಿಟಲ್‌ ಸಾಕ್ಷರತೆ’ ಯೋಜನೆ ರಾಜ್ಯಾದ್ಯಂತ ಅನುಷ್ಠಾನವಾಗುತ್ತಿದೆ.

Advertisement

ಶಿಕ್ಷಣ ಫೌಂಡೇಶನ್‌, ಡೆಲ್‌ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆಯ ಮೂಲಕ ಕಾರ್ಯಗತಗೊಳ್ಳುವ ಈ ಕಾರ್ಯಕ್ರಮಕ್ಕೆ ರಾಜ್ಯದ 35 ಗ್ರಾ.ಪಂ.ಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಹಾಗೂ ದ.ಕ. ಜಿಲ್ಲೆಯ ಬಂಟ್ವಾಳದ ಕೇಪು ಗ್ರಾ.ಪಂ. ಪ್ರಾಯೋಗಿಕವಾಗಿ ಆಯ್ಕೆಯಾಗಿದ್ದು, ಯಶಸ್ಸನ್ನು ಗಮನಿಸಿ ರಾಜ್ಯಾದ್ಯಂತ ಎಲ್ಲ ಗ್ರಾ.ಪಂ.ಗಳಿಗೆ ವಿಸ್ತರಿಸುವ ಗುರಿ ಇದೆ.

ಪ್ರಸ್ತುತ ಎಲ್ಲ ವ್ಯವಹಾರಗಳು ಡಿಜಿಟಲೀಕರಣವಾಗುತ್ತಿವೆ. ಮೊಬೈಲ್‌ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವಂತಿದೆ. ಯುಪಿಐ ಮೂಲಕ ಹಣ ಪಾವತಿ ಇದರ ಇನ್ನೊಂದು ಆಯಾಮ. ಹೀಗಾಗಿ ವ್ಯಕ್ತಿಯನ್ನು ಡಿಜಿಟಲ್‌ ಸಾಧನಗಳ ನಿರ್ವಹಣೆಗೆ ಸಾಕ್ಷರಗೊಳಿಸಿ ಡಿಜಿಟಲ್‌ ವ್ಯವಸ್ಥೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಸಮರ್ಪಕವಾಗಿ ಕಾರ್ಯಗತಗೊಳಿಸುವುದು, ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನವನ್ನು ತಲುಪಿಸುವುದು ಮತ್ತು ಕೌಶಲ ತರಬೇತಿ ಯೋಜನೆಯ ಮುಖ್ಯ ಉದ್ದೇಶ.

ಸಾಕ್ಷರತೆ ಯೋಜನೆ ಮಾದರಿಯಲ್ಲಿ ಪಾಠ
ಯೋಜನೆಗೆ ಆಯ್ಕೆಯಾದ ಗ್ರಾ.ಪಂ.ನಲ್ಲಿ 16ರಿಂದ 60ರ ವಯೋಮಾನದವರನ್ನು ಸರ್ವೇ ನಡೆಸಿ ಮೊಬೈಲ್‌ ಬಳಕೆಯ ಪ್ರಾಥಮಿಕ ಜ್ಞಾನವಿಲ್ಲದವರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಪಾಠಕ್ಕಾಗಿ ಎನ್‌ಎಸ್‌ಎಸ್‌, ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಮತ್ತು ಗ್ರಂಥಪಾಲಕರು, ಶಿಕ್ಷಣ ಫೌಂಡೇಶನ್‌ನ ತಾಲೂಕು, ಜಿಲ್ಲಾ ಸಂಯೋಜಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರತೀ ವಾರ್ಡ್‌ನಲ್ಲಿ ನಿರ್ದಿಷ್ಟ ಸ್ಥಳ ಗುರುತಿಸಿ ಅಲ್ಲಿ ವಾರದ ನಿಗದಿತ ದಿನ ಒಂದು ತಾಸು ತರಗತಿ ನಡೆಸಲಾಗುತ್ತದೆ. ಫಲಾನುಭವಿಯ ಬಳಿ ಮೊಬೈಲ್‌ ಇಲ್ಲದಿದ್ದರೆ ತರಬೇತಿ ಕೇಂದ್ರಕ್ಕೆ ಮೀಸಲಿರಿಸಿದ ಮೊಬೈಲನ್ನು ನೀಡಲಾಗುತ್ತದೆ.

ಕೇಪುವಿನಲ್ಲಿ ಈಗಾಗಲೇ ತರಗತಿ ಆರಂಭಗೊಂಡಿದ್ದು, ಫಲಾನುಭವಿಗಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಕೋಟತಟ್ಟುವಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿದೆ.

Advertisement

ಏನೆಲ್ಲ ಪಾಠಗಳು?
– ಮೊಬೈಲ್‌ನಲ್ಲಿ ಕರೆ ಮಾಡುವುದು, ಸಂದೇಶಗಳನ್ನು ಓದುವುದು ಹಾಗೂ ಆ್ಯಂಡ್ರಾಯ್ಡ ಫೋನ್‌ನಲ್ಲಿ ಆ್ಯಪ್‌ಗ್ಳ ಬಳಕೆ, ಆನ್‌ಲೈನ್‌ ಹಣ ಪಾವತಿ ವ್ಯವಸ್ಥೆ ಮೊದಲಾದವುಗಳ ಬಳಕೆಯ ಮಾಹಿತಿ.
– ಆನ್‌ಲೈನ್‌ ಮೂಲಕ ನಡೆಯುವ ವಂಚನೆ, ಅಪರಾಧಗಳ ಬಗ್ಗೆ, ಮಕ್ಕಳು ಮೊಬೈಲ್‌ ದುರುಪಯೋಗ ಮಾಡದಂತೆ ತಡೆಯುವ ಪೇರೆಂಟ್‌ ಕಂಟ್ರೋಲ್‌ ವ್ಯವಸ್ಥೆಯ ಬಗ್ಗೆ ಅರಿವು.
– ಪ್ರಾಯೋಗಿಕ ಹಾಗೂ ಪಿಪಿಟಿ ಮೂಲಕ ತರಗತಿ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next