Advertisement

ಜಿಲ್ಲಾಧಿಕಾರಿಗಳ ಹಳ್ಳಿ ವಾಸ್ತವ್ಯ ಫ‌ಲಪ್ರದವಾಗಲಿ

12:58 AM Jan 23, 2021 | Team Udayavani |

ಭಾರತದ ಭವಿಷ್ಯವಿರುವುದೇ ಅದರ ಹಳ್ಳಿಗಳಲ್ಲಿ ಎಂಬ ಮಹಾತ್ಮಾ ಗಾಂಧೀಜಿಯವರ ಮಾತು ಎಷ್ಟು ಸತ್ಯವೋ, ಆ ಸತ್ಯದ ಶಕ್ತಿಯನ್ನು ದೇಶವು ಅವಗಣಿಸುತ್ತಲೇ ಬಂದಿದೆ ಎನ್ನುವುದೂ ಅಷ್ಟೇ ಸತ್ಯ. ಅಭಿವೃದ್ಧಿಯೆನ್ನುವುದು ಕೇವಲ ನಗರಪ್ರದೇಶಗಳಿಗೆ ಸೀಮಿತವಾಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಆದಾಗ್ಯೂ ಡಿಜಿಟಲೀಕರಣದಿಂದಾಗಿ ಈಗ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆಯಾದರೂ ದಶಕಗಳಿಂದ ಇದ್ದ ಬೃಹತ್‌ ಸಮಸ್ಯೆಗಳು ಈಗಲೂ ಹಾಗೆಯೇ ಇವೆ.

Advertisement

ಶುದ್ಧ ಕುಡಿಯುವ ನೀರಿನ ಅಭಾವ, ಕಳಪೆ ರಸ್ತೆಗಳು, ಅನೈರ್ಮಲ್ಯ, ಬಡತನ ತಾಂಡವವಾಡುತ್ತಲೇ ಇದೆ. ಈ ಕಾರಣಕ್ಕಾಗಿಯೇ, ಈಗ ರಾಜ್ಯ ಸರಕಾರ ಸರಕಾರಿ ಸೇವೆಗಳನ್ನು ಗ್ರಾಮೀಣ ಜನರ ಮನೆ ಬಾಗಿಲಲ್ಲೇ ಕಲ್ಪಿಸುವ ನಿಟ್ಟಿನಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಘೋಷಿಸಿರುವುದು ಸ್ವಾಗತಾರ್ಹ.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಇತರ ಹಿರಿಯ ಅಧಿಕಾರಿಗಳೊಂದಿಗೆ ಪ್ರತೀ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯತ್‌ಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳಿಗೆ ಕಿವಿಯಾಗಬೇಕು, ಅಗತ್ಯ ಸೌಲಭ್ಯಕ್ಕೆ ಸ್ಥಳದಲ್ಲೇ ಕ್ರಮ ವಹಿಸಲು ಮುಂದಾಗಬೇಕು ಎನ್ನುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ.  ಗಮನಾರ್ಹ ಸಂಗತಿಯೆಂದರೆ, ಜಿಲ್ಲಾಧಿಕಾರಿಗಳು ಯಾರ ಮನೆಯಲ್ಲೂ ಆಹಾರ ಸೇವಿಸದೇ ಅಂಗನವಾಡಿ, ಸರಕಾರಿ ಶಾಲೆಯಲ್ಲಿ ಊಟ ಮಾಡಿ ಗುಣಮಟ್ಟ ಪರಿಶೀಲಿಸುವುದು,  ಪ.ಜಾತಿ ಪಂಗಡದ ವಿದ್ಯಾರ್ಥಿನಿಲಯಗಳು ಅಲ್ಲಿದ್ದರೆ ಅಲ್ಲಿಯೂ ಆಹಾರ ಸೇವಿಸುವುದು, ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಂಥ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಫೆಬ್ರವರಿಯಿಂದಲೇ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಆರಂಭವಾಗಲಿದೆ.

ಈ ಪರಿಕಲ್ಪನೆ ನಿಜಕ್ಕೂ ಶ್ಲಾಘನೀಯವಾದದ್ದು. ಆದರೆ ಇದು ಕೇವಲ ನೆಪ ಮಾತ್ರ ಕಾರ್ಯಕ್ರಮವಾಗಿ ಉಳಿದುಹೋಗಬಾರದು. ಏಕೆಂದರೆ ರಾಜ್ಯಕ್ಕೆ ಗ್ರಾಮವಾಸ್ತವ್ಯ ಕಲ್ಪನೆ ಎನ್ನುವುದು ಹೊಸತೇನೂ ಅಲ್ಲ, ಮುಖ್ಯಮಂತ್ರಿಗಳಿಂದ ಹಿಡಿದು ಅನೇಕ ಜನಪ್ರತಿನಿಧಿಗಳು ಗ್ರಾಮಗಳಿಗೆ ತೆರಳಿದ್ದನ್ನು ನಾವು ನೋಡಿದ್ದೇವೆ. ಆದರೆ ಜನಪ್ರತಿನಿಧಿಗಳು ಬಂದುಹೋದ ಅನಂತರವೂ ಯಾವ ಗ್ರಾಮವೂ ಸರ್ವಾಂಗೀಣ ಅಭಿವೃದ್ಧಿ ಕಂಡ ಉದಾಹರಣೆಗಳಿಲ್ಲ. ಇನ್ನು ಜನಪ್ರತಿನಿಧಿಗಳು ಬರುತ್ತಾರೆಂದಾಕ್ಷಣ ಅವಸರವಾಗಿ ಗ್ರಾಮಗಳನ್ನು ಸ್ವತ್ಛಗೊಳಿಸುವುದು, ರಸ್ತೆಗಳಿಗೆ ತಾತ್ಕಾಲಿಕ ತೇಪೆ ಹಚ್ಚುವಂಥ ಕಾರ್ಯಗಳು ನಡೆಯುತ್ತಿರುತ್ತವೆ. ಈಗ ಜಿಲ್ಲಾಧಿಕಾರಿಗಳ ವಾಸ್ತವ್ಯದ ವಿಚಾರವೂ ಇದೇ ಮಾದರಿಯಲ್ಲಿ ಸಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಇದು ಜಿಲ್ಲಾಧಿಕಾರಿಗಳಿಗೆ ದೊರೆತ ಅಪೂರ್ವ ಅವಕಾಶವೂ ಹೌದು. ಹಳ್ಳಿಗಳಲ್ಲಿ ವಾಸ್ತವ್ಯ ಹೂಡುವುದರಿಂದ ಅಂಗನವಾಡಿ, ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಆಹಾರ ಸೇವಿಸುವುದರಿಂದ ಅಲ್ಲಿನ ಕುಂದುಕೊರತೆಗಳ ವಾಸ್ತವ ದರ್ಶನವೂ ಆಗುತ್ತದೆ. ಗ್ರಾಮೀಣರ ಸಮಸ್ಯೆಗಳ ಆಳ-ಅಗಲಗಳನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ, ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರುವಂತೆನೋಡಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next