Advertisement

ಗ್ರಾಮ ವಾಸ್ತವ್ಯ ವಾರ್! ಶೂನ್ಯ ಸಾಧನೆ ಬಿಜೆಪಿ ಟೀಕೆಗೆ, ಸಿಎಂ ಕುಮಾರಸ್ವಾಮಿ ಉತ್ತರ

10:07 AM Jun 25, 2019 | Nagendra Trasi |

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ಆರೋಗ್ಯಕರವಾಗಿರುವುದಿಲ್ಲ. ಅದರಲ್ಲೂ ವೈಯಕ್ತಿಕ ವಿಷಯಗಳ ಬಗ್ಗೆ ಮಾಡಿರುವ ಪ್ರಸ್ತಾಪಗಳು ಕೀಳು ಅಭಿರುಚಿಯಿಂದ ಕೂಡಿದೆ. ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

Advertisement

ಗ್ರಾಮ ವಾಸ್ತವ್ಯ:

ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗಳ ಅಭಿವೃದ್ಧಿ ಕುರಿತು ಯಡಿಯೂರಪ್ಪನವರು ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದ್ದಾರೆ. ನಾನು ಇದಕ್ಕೆ ಮುಂಚಿತವಾಗಿಯೇ ಈ ಗ್ರಾಮಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದೇನೆ. ಈ ಗ್ರಾಮಗಳಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನೂ ಲಗತ್ತಿಸಿದ್ದೇನೆ. ನನ್ನ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಕೇವಲ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ. ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ, ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು, ಜನರ ಆಶಯಗಳನ್ನು ಅರ್ಥೈಸಿಕೊಂಡು ಯೋಜನೆಗಳನ್ನು ರೂಪಿಸುವುದು, ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕಿಸಲು ಇರುವ ತೊಡಕುಗಳನ್ನು ನಿವಾರಿಸುವುದು ಗ್ರಾಮ ವಾಸ್ತವ್ಯದಿಂದ ಸಾಧ್ಯ.

ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ಥಾಪನೆ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮೊದಲಾದ ಉಪಕ್ರಮಗಳಿಗೆ ಪ್ರೇರಣೆ ನನ್ನ ಗ್ರಾಮ ವಾಸ್ತವ್ಯದ ಅನುಭವಗಳು. ನಾನು ತಂಗಿದ ಗ್ರಾಮಗಳಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಸಾಧ್ಯವಾಗಿದೆ. ಆದರೆ ನಂತರದ ದಿನಗಳಲ್ಲಿ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ಈ ಗ್ರಾಮಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆಂಬ ಮಾಹಿತಿ ನೀಡಲಿ.

ಗ್ರಾಮ ವಾಸ್ತವ್ಯ ವ್ಯರ್ಥ, ಅದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪ್ರಯಾಣ ವೆಚ್ಚ, ಶಾಲೆಯಲ್ಲಿ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯ ಮಾತ್ರ ನನ್ನ ವೆಚ್ಚ. ಇದೇ ಸಂದರ್ಭ ಬಳಸಿ, ವಿವಿಧ ಇಲಾಖೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ/ ಉದ್ಘಾಟನೆ ಮಾಡಿದ್ದಲ್ಲಿ, ಅವುಗಳು ಗ್ರಾಮ ವಾಸ್ತವ್ಯದ ವೆಚ್ಚದ ವ್ಯಾಪ್ತಿಗೆ ಬರುವುದಿಲ್ಲ. ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ 58 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಆದರೆ ವಾಸ್ತವತೆಯನ್ನು ತಿಳಿದುಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ಯಡಿಯೂರಪ್ಪನವರು ಮಾತನಾಡಬೇಕೆಂದು ನಾನು ಆಶಿಸುತ್ತೇನೆ.

Advertisement

ಗ್ರಾಮ ವಾಸ್ತವ್ಯ ಪ್ರಚಾರದ ಗಿಮಿಕ್ ಅಲ್ಲ. ಅಂತಃಕರಣ, ಮಾನವೀಯತೆ, ತಾಯಿ ಹೃದಯದಿಂದ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಸಾಧ್ಯ.

ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಶ್ರೀರಾಮಪುರ ಗ್ರಾಮದಲ್ಲಿ ನಸುಕಿನ ಜಾವದ ವರೆಗೆ ನನ್ನೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದ ಯಡಿಯೂರಪ್ಪನವರಿಗೆ ಅಂದು ಸಿಹಿಯಾಗಿದ್ದು, ಇಂದು ಕಹಿಯಾಗಿರುವುದು ಏಕೆ?

ಆಡಳಿತಾತ್ಮಕ ವಿಚಾರಗಳಿಗೆ ರಚನಾತ್ಮಕವಾಗಿ ಟೀಕೆ ಮಾಡಿದಲ್ಲಿ, ನಾನು ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುತ್ತೇನೆ. ಆದರೆ ಸರ್ಕಾರದ ವ್ಯಾಪ್ತಿಗೆ ಬಾರದ ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಪದೇ ಪದೇ ಮಾತನಾಡಿ, ವಿರೋಧ ಪಕ್ಷದ ನಾಯಕರ ಸ್ಥಾನದ ಘನತೆಗೆ ಕುಂದು ತರಬಾರದೆಂದು ಮಾಧ್ಯಮಗಳ ಮೂಲಕ ಸನ್ಮಾನ್ಯ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ರೈತರ ಆತ್ಮಹತ್ಯೆ:

ಕಳೆದ ಒಂದು ವರ್ಷದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಶೇ. 30 ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಮಾನ್ಯ ವಿರೋಧ ಪಕ್ಷದ ನಾಯಕರೂ ಗಮನಿಸಿರಬಹುದೆಂದು ಭಾವಿಸುತ್ತೇನೆ.  ಆದರೆ ಇದನ್ನು ಸಾಧನೆ ಎಂದು ಹೇಳಿಕೊಳ್ಳಲಾಗದು. ರೈತರ ಆತ್ಮಹತ್ಯೆ ಪ್ರಕರಣ ಶೂನ್ಯವಾಗಬೇಕು ಎನ್ನುವುದು ನಮ್ಮ ಆಶಯ. ಇದನ್ನು ಸಾಕಾರಗೊಳಿಸುವ ದೃಢ ಸಂಕಲ್ಪದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಮಾಡದೆ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಮಾತನಾಡಬೇಕೆ ಹೊರತು, ರೈತರ ಸ್ಥೈರ್ಯವನ್ನು ಕುಗ್ಗಿಸುವ ಯಾವ ಪ್ರಯತ್ನವೂ ಆರೋಗ್ಯಕರವಲ್ಲ.

ಐಎಂಎ ಹಗರಣ:

ಐಎಂಎ ಹಗರಣ ಕುರಿತು ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಎಸ್ಐಟಿ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಬಳಿ ಸರ್ಕಾರದ ಸಚಿವರು, ಶಾಸಕರು ಮತ್ತಿತರರು ಈ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಸೂಕ್ತ ದಾಖಲೆಗಳಿದ್ದರೆ, ಎಸ್ಐಟಿಗೆ ನೀಡಲಿ. ಪ್ರಕರಣವು ತನಿಖಾ ಹಂತದಲ್ಲಿ ಇರುವಾಗ ದಾಖಲೆಗಳಿಲ್ಲದೆ, ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿ, ತನಿಖೆಯ ಹಾದಿ ತಪ್ಪಿಸುವುದು ಸೂಕ್ತವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next