ಕಲಬುರಗಿ: ಸರ್ಕಾರದ ನಡೆ ಹಳ್ಳಿ ಕಡೆ ಅಂಗವಾಗಿ ಇದೇ ಆಗಷ್ಟ 20ರಂದು ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸಲು ಪ್ರಮುಖ 10 ಇಲಾಖೆಗಳ 20 ಯೋಜನೆಗಳನ್ನು ಅರ್ಹ ಫಲಾನಭವಿಗಳಿಗೆ ಸೌಲಭ್ಯ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿಯ ಈ ಕಾರ್ಯಕ್ರಮದಲ್ಲಿ 38 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವುದರ ಮುಖಾಂತರ ಮಹತ್ವದ ಸಾಧನೆಯಾಗಲಿದೆ ಎಂದು ಸೇಡಂ ಕ್ಷೇತ್ರದ ಶಾಸಕರು ಆಗಿರುವ ಡಿಸಿಸಿ ಬ್ಯಾಂಕ್ ಮತ್ತು ಕೆಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೇಡಂ ತಾಲೂಕಿನ 120 ಹಳ್ಳಿಗಳು, 50 ತಾಂಡಾಗಳು ಹಾಗೂ ಸೇಡಂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಿಂಚೋಳಿ ತಾಲೂಕಿನ 40 ಹಳ್ಳಿಗಳ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೌಲಭ್ಯ ಪಡೆಯಲಿದ್ದಾರೆ. ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಹತ್ತು ಇಲಾಖೆಗಳ 20 ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಜಂಟಿ ಕೃಷಿ ಅಧಿಕಾರಿಗಳ ನೋಡಲ್ ಅಧಿಕಾರಿಗಳ ನೇತೃತ್ವ ತಂಡ ಕ್ಷೇತ್ರದ 37 ಗ್ರಾಮ ಪಂಚಾಯಿತಿಗಳ ಪ್ರತಿಯೊಂದು ಹಳ್ಳಿಗೆ ತೆರಳಿ ರೂಪಿಸುತ್ತಿದೆ. ಸಚಿವರ ಗ್ರಾಮ ವಾಸ್ತವ್ಯದಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ವಿಧವಾ ವೇತನ, ಅಂಗವಿಕರ ಮಾಸಾಶನ, ಪಹಣಿ ತಿದ್ದುಪಡಿ, ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಲಾಭ ಪಡೆಯುವ ನಿಟ್ಟಿನ ದೋಷಗಳ ಸರಿಪಡಿಸುವಿಕೆ, ಪಹಣಿ ತಿದ್ದುಪಡಿ ಸೇರಿದಂತೆ ಇತರ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದರು.
ಕಂದಾಯ ಸಚಿವರಿಗೆ ಭವ್ಯ ಸ್ವಾಗತ: ಕಂದಾಯ ಸಚಿವರನ್ನು 10 ಸಾವಿರ ಮಹಿಳೆ ಯರ ಕುಂಭ ಮೇಳದ ಮುಖಾಂತರ ಸ್ವಾಗತಿಸಲಾಗುತ್ತಿದ್ದು, ಸಚಿವರನ್ನು ಆಡಕಿ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನವರೆಗೆ ಮೆರವಣಿಗೆ ನಡೆಯಲಿದೆ. ದೇವಸ್ಥಾನವನ್ನು 1.10 ಕೋ.ರೂ ವೆಚ್ಚದಲ್ಲಿ ಜಿರ್ಣೋದ್ಧಾರ ಮಾಡಲಾಗಿದೆ. ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಮಾಣ ಮತ್ರ ವಿತರಿಸುವ ಅಹವಾಲು ಸಮಸ್ಯೆ ಆಲಿಸುವ ಕಾರ್ಯಕ್ರಮ ನಡೆಯಲಿದೆ. ಆಡಕಿ ಗ್ರಾಮ ಸೇಡಂ ತಾಲೂಕಿನ ಗಡಿ ಭಾಗದ ಕಂದಾಯ ಗ್ರಾಮವಾಗಿದೆ. ಕ್ಷೇತ್ರದ ಎಲ್ಲ ಜನರು ಬರಲು ಅನುಕೂಲವಾಗಿದ್ದರಿಂದ ಆಡಕಿ ಆಯ್ಕೆ ಮಾಡಿಕೊಳ್ಳಲಾಗಿದೆ. ಫಲಾನುಭವಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಂದಾಯ ಸಚಿವರು 26 ಗಂಟೆ ಕಾಲ ಗ್ರಾಮ ವಾಸ್ತವ್ಯ ಮಾಡಲಿದ್ದು, ಇದೇ ವೇಳೆ ಮಳೆಯಿಂದ ಆಗಿರುವ ಹಾನಿಯನ್ನು ಕಂದಾಯ ಸಚಿವರು ವೀಕ್ಷಿಸಲಿದ್ದು, ಈಗಾಗಲೇ ಹಾನಿಯ ಕುರಿತಾಗಿ ಸಮೀಕ್ಷೆ ನಡೆದಿದೆ ಎಂದು ಇದೇ ಸಂದರ್ಭದಲ್ಲಿ ತೇಲ್ಕೂರ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ಧಾಜೀ ಪಾಟೀಲ್, ಕಲ್ಯಾಣಪ್ಪ ಮಳಖೇಡ, ಧರ್ಮಣ್ಣ ಇಟಗಾ ಇದ್ದರು.