ರಾಮನಗರ: ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ 840 ಗ್ರಾಮಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ ಸಿಗುವಂತಿರಬೇಕು. ಕಾಲೇಜು ವಿದ್ಯಾರ್ಥಿಗಳ ಅಧ್ಯಯನ ತಂಡ ರಚಿಸಿ ಗ್ರಾಮಗಳ ಮಾಹಿತಿ ಸಂಗ್ರಹಿಸುವಂತೆ ಪ್ರಮಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ನಗರದ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿ (ಡೀಸಿ ಕಚೇರಿ) ಪ್ರವಾಸೋಧ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮಗಳಲ್ಲಿನ ಸಂಸ್ಕೃತಿ, ಸಾಮಾಜಿಕ ಪದ್ಧತಿಗಳು, ಜನಸಂಖ್ಯೆ, ಆಹಾರ ಪದ್ಧತಿ, ದೇವಾಲಯಗಳು, ಬೆಟ್ಟ, ಗುಡ್ಡ, ಪುರಾತನ ಕಟ್ಟಡಗಳು, ಪ್ರಕೃತಿ, ಆರ್ಥಿಕ ಸ್ಥಿತಿಗತಿ, ವೀರಗಲ್ಲುಗಳು, ಶಾಸನಗಳು, ಸದರಿ ಗ್ರಾಮದ ಹಿಂದಿನ ಇತಿಹಾಸ, ಪ್ರಮುಖ ವ್ಯಕ್ತಿಗಳು ಹೀಗೆ ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.
ಅಧ್ಯಯನಕ್ಕೆ ಕಾಲೇಜು ವಿದ್ಯಾರ್ಥಿಗಳ ತಂಡ: ಗ್ರಾಮಗಳ ಅಧ್ಯಯನಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡರೆ ಸಾಕಷ್ಟು ವಿಚಾರಗಳು ಮನವರಿಕೆಯಾಗುತ್ತವೆ. ಸಂಶೋಧನೆ ಕೈಗೊಳ್ಳುವ ಮನಸ್ಸಿದ್ದರೆ ಉಪಯೋಗ ಆಗುತ್ತದೆ. ಹೀಗೆ ರಚನೆಯಾದ ಪ್ರತಿಯೊಂದು ತಂಡಕ್ಕೂ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಪ್ರತಿ ತಂಡವನ್ನು ಒಂದೊಂದು ಗ್ರಾಮಕ್ಕೆ ನಿಯೋಜಿಸಿ, ಗ್ರಾಮಗಳ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, 2 ದಿನಗಳ ಅಧ್ಯಯನ ನಡೆಯಲಿ ಎಂದರು.
ಅರ್ಹ ಪ್ರವಾಸಿ ತಾಣ ಗುರುತಿಸಲು ಸೂಚನೆ: ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ 15 ಪ್ರವಾಸಿ ತಾಣಗಳನ್ನು ಹೊರತುಪಡಿಸಿ ಮತ್ತಷ್ಟು ಯೋಗ್ಯ ತಾಣಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೀಗೆ ಪಟ್ಟಿ ಮಾಡುವಾಗ ಹಾಲಿ ಲಭ್ಯವಿರುವ ಮೂಲ ಸೌಕರ್ಯ, ರಸ್ತೆ ಸಂಪರ್ಕ, ಸ್ವತ್ಛತೆ ಮುಂತಾದ ಮಾಹಿತಿಯಿರುವವರದಿ ಸಲ್ಲಿಸುವಂತೆ ಸೂಚಿಸಿದರು. ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಬೇಕಾದರೆ ಬೇಕಾದ ಸೌಕರ್ಯಗಳ ವಿವರಗಳ ಪ್ರಸ್ತಾವನೆ ಸಲ್ಲಿಸಿ ಎಂದರು. ಆಯ್ದ ಗ್ರಾಮಗಳಲ್ಲಿ ಹೋಂ ಸ್ಟೇಗಳಿಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 10 ಕುಟುಂಬಗಳಿಗೆ ಹೋಂ ಸ್ಟೇಗೆ ಅನುಮತಿ ನೀಡಲಾಗುವುದು. ಹೀಗೆ ಕಲ್ಪಿಸುವ ವ್ಯವಸ್ಥೆಯಲ್ಲಿ ಪ್ರವಾಸಿಗರಿಗೆ ಸ್ಥಳದ ಪದ್ಧತಿಗಳು, ಸಂಸ್ಕೃತಿ, ಆಹಾರ bಹೀಗೆ ಗ್ರಾಮೀಣ ಸೊಗಡು ಪ್ರಮುಖವಾಗಿರಬೇಕು. ಕೇರಳ ರಾಜ್ಯದಲ್ಲಿ ಇಂತಹ ಕಾರ್ಯಕ್ರಮ ಜಾರಿಯಲ್ಲಿದೆ ಎಂದರು. ಜಿಲ್ಲೆಯಲ್ಲಿರಬಹುದಾದ ಯಾತ್ರಿ ನಿವಾಸಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ರಾಜ್ಯಕ್ಕೆ ನೂತನ ಪ್ರವಾಸೋದ್ಯಮ ನೀತಿ: ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೆಚ್ಚಿಸಲು ನೂತನ ನೀತಿಯನ್ನು ಜಾರಿಗೆ ತರುವುದಾಗಿ ಸಚಿವ ಸಿ.ಟಿ.ರವಿ ತಿಳಿಸಿದರು. ಸ್ಥಳೀಯ ಸಂಸ್ಕೃತಿ, ಪದ್ಧತಿಗಳನ್ನು ಜೋಡಿಸಿ, ಪರಿಸರಕ್ಕೆ ಮಾರಕವಾಗದಂತೆನೂತನ ನೀತಿಯನ್ನು ಸಿದ್ಧಪಡಿಸಲಾಗುವುದು. ಕರಾವಳಿ, ಪಶ್ಚಿಮ ಘಟ್ಟ, ಪರಂಪರೆ ಹೀಗೆ ವಿವಿಧ ಮಜಲುಗಳಲ್ಲಿ ಹೊಸ ನೀತಿ ಸಿದ್ಧವಾಗಲಿದೆ ಎಂದರು. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಪ್ರವಾಸೋಸದ್ಯಮ ಇಲಾಖೆ ನಿರ್ದೇಶಕ ಕೆ.ಎನ್. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಜಾನಕಿ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪನಿರ್ದೇಶಕಶಂಕರಪ್ಪ ಹಾಜರಿದ್ದರು.