ಮಧುಗಿರಿ: ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಪಂನಲ್ಲಿ ಗ್ರಾಮ ಪಂಚಾಯಿತಿ ಕಾಯ್ದೆಯಂತೆ ಯಾವುದೂ ನಡೆಯಲ್ಲ. ಅವ್ಯವಹಾರವೂ ಹೆಚ್ಚಾಗಿದ್ದು, ಕ್ಷೇತ್ರದ ಅತಿ ಭ್ರಷ್ಟ ಗ್ರಾಪಂ ಆಗಿದೆ. ಇನ್ನಷ್ಟು ಕುಖ್ಯಾತಿ ಪಡೆಯುವುದರಲ್ಲಿ ಅನುಮಾನವಿಲ್ಲ.
ಹೌದು… ಬೇರೊಂದು ಗ್ರಾಪಂ ಸದಸ್ಯನೇ ಬೇಡತ್ತೂರು ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಿಗೇನಹಳ್ಳಿ ಗ್ರಾಪಂನ ರಾಜಕೀಯ ಪಕ್ಷದ ಬೆಂಬಲಿತ ಸದಸ್ಯ ಸುರೇಶ್ ಎಂಬಾತನೇ ಬೇಡತ್ತೂರು ಗ್ರಾಮ ಪಂಚಾಯಿತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್.
ಮಿಗಿಲಾಗಿ ಪಂಚಾಯಿತಿ ಸದಸ್ಯ ಹಾಗೂ ಆತನ ಕುಟುಂಬದ ಸದಸ್ಯರು ಸರ್ಕಾರದ ಯೋಜನೆ ಅನುಭವಿಸುವುದು ಕಾನೂನು ಬಾಹಿರವಾದರೂ ಇಲ್ಲಿ ಸಕ್ರಮವಾಗಿದೆ. ಈ ಬಗ್ಗೆ ಹಿಂದಿನ ಕಂಪ್ಯೂಟರ್ ಆಪರೇಟರ್ ತಿಮ್ಮರಾಜು, ಜಿಪಂ ಸಿಇಒ ಶುಭ ಕಲ್ಯಾಣ್‌ಗೆ ದೂರು ನೀಡಿದ್ದು, ಅಧ್ಯಕ್ಷೆ ಪ್ರಮೀಳಾ ಕೆಲಸ ಕಸಿದು ರಾಜಕೀಯ ಪ್ರಭಾವಕ್ಕೆ ಮಣಿದು ಕಾನೂನು ಗಾಳಿಗೆ ತೂರಿ ಬೇರೊಂದು ಗ್ರಾಮ ಪಂಚಾಯಿತಿ ಸದಸ್ಯನನ್ನು ಕೆಲಸಕ್ಕೆ ನೇಮಿಸಿದ್ದಾರೆ. ತನಗಾಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಪಂನಲ್ಲಿ ಅವ್ಯವಹಾರ ನಡೆದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾದವರೂ ಕೆಲ ಯೋಜನೆಗಳಲ್ಲಿ ಫಲಾನುಭವಿಗಳಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಾದವರು ಸರ್ಕಾರಿ ಯೋಜನೆ ಫಲಾನುಭವಿಯಾಗುವಂತಿಲ್ಲ. ಕುಟುಂಬ ಸದಸ್ಯರು ಸೇರಿ ತಾನು ಯಾವುದೇ ಕಾಮಗಾರಿ ನಡೆಸುವಂತಿಲ್ಲ. ತನ್ನ ಹೆಸರಿಗೆ ಹಣ ಪಡೆಯುವಂತಿಲ್ಲ.
ಸ್ಥಳೀಯರಿಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯಿತಿ ಕಾನೂನು ಗಾಳಿಗೆ ತೂರಿದ್ದು, ಹಾಲಿ ಕಾರ್ಯ ನಿರ್ವಹಿಸುತ್ತಿರುವ ನೌಕರನಿಗೆ ಅನ್ಯಾಯ ಮಾಡಿ ಬೇರೆ ಹೋಬಳಿಯ ಗ್ರಾಪಂ ಸದಸ್ಯನಿಗೆ ಕೆಲಸ ನೀಡಿದೆ. ಕಾನೂನು ಬಾಹಿರ ಚಟುವಟಿಕೆಗೆ ಅಧ್ಯಕ್ಷೆ ಕುಮ್ಮಕ್ಕು ಇದೆ ಎಂದು ತಿಮ್ಮರಾಜು ಆರೋಪಿಸಿದ್ದಾರೆ. ಕಳೆದ ಅ.21ರಲ್ಲಿ ಜಿಪಂಗೆ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದು, ಈ ಬಗ್ಗೆ ಇಒ ತನಿಖೆ ನಡೆಸಿ ಜಿಪಂಗೆ ವರದಿ ನೀಡುವಂತೆ ನ.16ರಲ್ಲಿಯೇ ಇಒಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾದರೆ ತಪ್ಪಿತಸ್ಥರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ನೂತನ ಪಿಡಿಒ ನವೀನ್, ಈ ಬಗ್ಗೆ ಮೇಲಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಪಂ ಸದಸ್ಯರೊಬ್ಬರು ಗ್ರಾಪಂ ಕಚೇರಿಯಲ್ಲೇ ಕಂಪ್ಯೂಟರ್ ಆಪರೇಟ್ ಆಗಿರುವುದು ಕಾನೂನು ಬಾಹಿರ. ಸುರೇಶ್ ಎಂಬಾತ ಗ್ರಾಪಂ ಸದಸ್ಯ ಎಂಬುದು ತಿಳಿದಿಲ್ಲ. ಈ ಬಗ್ಗೆ ದೂರುದಾರರ ಮನವಿ ಪರಿಶೀಲಿಸಿ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ
. –ದೊಡ್ಡಸಿದ್ದಯ್ಯ, ಇಒ ತಾಪಂ, ಮಧುಗಿರಿ