ಮಣಿಪಾಲದ ತ್ರಿವರ್ಣ ಆರ್ಟ್ ಸೆಂಟರ್‌ನ ಹರೀಶ್ ಸಾಗಾ ಇತ್ತೀಚೆಗೆ ಮಣಿಪಾಲದ ಗೀತಾ ಮಂದಿರದಲ್ಲಿ ವಿಲೇಜ್ ಲೈಫ್ ಕಲಾಪ್ರದರ್ಶನ ನಡೆಸಿ ಮನಗೆದ್ದಿದ್ದಾರೆ. ಹಳ್ಳಿಯ ಸೆಟ್ಟಿಂಗಿನೊಂದಿಗೆ ಕಲಾಪ್ರದರ್ಶನ ನಡೆಸಿದ್ದು ವಿಶೇಷವಾಗಿತ್ತು. ಗೀತಾ ಮಂದಿರದೊಳಗೆ ಬಿದಿರಿನ ಕಂಬಗಳ ಮೇಲೆ ಬೈಹುಲ್ಲಿನ ಚಪ್ಪರದ ಮೇಲ್ಛಾವಣಿ, ಅದಕ್ಕೆ ಕಟ್ಟಿರುವ ಮಾವಿನ ಎಲೆಯ ತೋರಣದ ಗುಡಿಸಲೊಳಗೆ ಕಂಗೊಳಿಸುವ ಗ್ರಾಮೀಣ ಬದುಕಿನ ಜೀವಂತ ಕಲಾಕೃತಿಗಳು.
ಮಂದಿರದೊಳಗೆ ಎಲ್ಲಾ ಲೈಟ್‌ಗಳನ್ನು ಆರಿಸಿ ಕಲಾಕೃತಿ ಮಾತ್ರ ಪ್ರಕಾಶಮಾನವಾಗಿ ಕಾಣಲು ಬಿಟ್ಟಿರುವ ಹಳದಿ ಫೋಕಸ್ ಲೈಟ್. ಒಟ್ಟಾರೆ ಹಳ್ಳಿಗೆ ಹೋಗಿ ಕಲಾಪ್ರದರ್ಶನ ಕಂಡಂತೆ ಭಾಸವಾಗುತ್ತಿತ್ತು. ಹಾಗಾಗಿ ಮೂರು ದಿನವೂ ಮಂದಿರದೊಳಗೆ ಜನಜಂಗುಳಿಯಿತ್ತು. ಕೆಲವು ಕಲಾಕೃತಿಗಳು ದಾಖಲೆ ಬೆಲೆಗೆ ಮಾರಾಟವೂ ಆಯ್ತು.
ಕಲಾಪ್ರದರ್ಶನದಲ್ಲಿ 19 ವರ್ಷದಿಂದ 75 ವರ್ಷ ವಯಸ್ಸಿನ 24 ಮಂದಿ ಕಲಾವಿದರ ಐವತ್ತಕ್ಕೂ ಮೀರಿ ವೈವಿಧ್ಯಮಯ ಕಲಾಕೃತಿಗಳು ಪ್ರದರ್ಶನಗೊಡಿವೆ. ಕ್ಯಾನ್ವಾಸ್ ಮೇಲೆ ಆಕ್ರಿಲಿಕ್ ಬಣ್ಣದ ಕಲಾಕೃತಿಗಳು ಹಾಗೂ ಕಾಗದದ ಮೇಲೆ ಚಾರ್ಕೋಲ್ ಚಿತ್ರಗಳು ಅಂದಚೆಂದದ ಚೌಕಟ್ಟಿನೊಂದಿಗೆ ಆಕರ್ಷಕವಾಗಿದ್ದವು.
ಮಣಿಪಾಲದ ಡಾ. ಜಿ. ಶಿವಪ್ರಕಾಶ್, ಜಯಾ ಎಸ್. ಕುಡ್ವ, ಪ್ರಸಾದ್ ಆರ್., ಪೆರ್ಡೂರಿನ ಡಾ| ಜಿ.ಎಸ್.ಕೆ.ಭಟ್., ಜಿ.ಯಶ, ಕುಂದಾಪುರದ ಆಶಾ ತೋಳಾರ್, ಜೈ ನೇರಳೆಕಟ್ಟೆ, ಬಿ.ಸಚಿನ್ ರಾವ್, ಮುಂಬಯಿಯ ನಿರ್ಮಲಾ ಸಿ.ಚೆಟ್ಟಿ, ಮಾಧವಿ ಮುನ್ನಾಲುರಿ, ಸುಷ್ಮಾ ಎಸ್., ವೈಷ್ಣವಿ, ಮಹಾಲಕ್ಷ್ಮೀ ಹೆಬ್ಟಾರ್, ಉಡುಪಿಯ ಶಹನಾಝ್ ಎಚ್., ಶಿವಮೊಗ್ಗದ ಪವಿತ್ರ ಸಿ., ಆತ್ರಾಡಿಯ ಗುರುಪ್ರಸಾದ್ ಯು., ಹಾಲಾಡಿಯ ಪಲ್ಲವಿ ಜೆ.ಅಡಿಗ, ಹಿರಿಯಡ್ಕದ ಅಭಿನಯಾ ಎನ್. ಮುಂತಾದವರ ಕಲಾಕೃತಿಗಳು ಕಲಾಪ್ರದರ್ಶನದಲ್ಲಿದ್ದವು. ಮುಖ್ಯವಾಗಿ ಮಣಿಪಾಲದ ಡಿ.ವಿ.ಶೆಟ್ಟಿಗಾರರ ಆಕ್ರಿಲಿಕ್ ಕಲಾಕೃತಿ ಅಕ್ಕಿಮುಡಿ ಕಟ್ಟುತ್ತಿರುವ ಅನ್ನದಾತನ ಚಿತ್ರ, ಪರ್ಕಳದ ಅನುಷ ಆಚಾರ್ಯರ ಅಭ್ಯಂಗ (ಮಗುವಿಗೆ ಎಣ್ಣೆಸ್ನಾನ ಮಾಡಿಸುತ್ತಿರುವ ಅಜ್ಜಿ), ಮಾಬುಕಳದ ನಯನ ಬಿ. ಯವರ ಮಡಲು ಹೆಣೆಯುತ್ತಿರುವ ಮಹಿಳೆ, ಚಿಕ್ಕಮಗಳೂರಿನ ಸುನಿಧಿ ಶೆಟ್ಟಿಯವರ ಭೂತದ ಕೋಲ, ಕುಂದಾಪುರದ ಹೃತಿಕ್ ಎಸ್. ಶೆಟ್ಟಿಯವರ ಮನೆಗೆ ಹೊಸತೆನೆತರುವ ದೃಶ್ಯ, ಕೋಟೇಶ್ವರದ ಸುಮಾ ಪುತ್ರನರ ಚಾರ್ಕೋಲ್ ಚಿತ್ರಗಳಾದ ಒಲೆಗೆ ಗಾಳಿಯೂದುತ್ತಿರುವವಳು, ಸುಷ್ಮಾರ ಲಗೋರಿ ಆಟ, ಜೈ ನೇರಳೆಕಟ್ಟೆಯವರ ಐಸ್ ಕ್ರೀಂ ಮಾರುವವ, ಉಡುಪಿಯ ಕೆರೊಳಿನ್‌ರವರ ಚಿಮಣಿ ದೀಪದೆದುರು ಓದುವ ಬಾಲಕ, ಮುಂಬಯಿಯ ಮಾಧವಿ ಮುನ್ನಾಲುರಿಯವರ ಬಂಡಿಬಿಡುತ್ತಿರುವ ಪೋರ ಚಿತ್ರಗಳು ಆಕರ್ಷಕವಾಗಿದ್ದವು. ಚಿತ್ರಗಳು ನೈಜತೆಗೆ ಒತ್ತುಕೊಟ್ಟು ರಚಿಸಿದ್ದಾದರೂ ರೇಖೆ ಮತ್ತು ಬಣ್ಣಗಾರಿಕೆಯಲ್ಲಿ ಕಲಾವಿದರ ಸ್ವಂತಿಕೆ ಎದ್ದುಕಾಣುತ್ತಿತ್ತು. ಫೊಟೊಗ್ರಫಿ ವಿಧಾನದಿಂದ ಮಾಡಲಾಗದ್ದನ್ನು ಕಲಾವಿದ ಕಲಾಕೃತಿಯೊಳಗೆ ಹೆಣೆದಿದ್ದಾನೆ ಎಂದರೆ ತಪ್ಪಾಗಲಾರದು.
– ಉಪಾಧ್ಯಾಯ ಮೂಡುಬೆಳ್ಳೆ