Advertisement

ಲೋಕಸಭಾ ಚುನಾವಣೆಗೂ ಮೊದಲೇ ಆಗುತ್ತಾ ಹಳ್ಳಿ ಫೈಟ್‌?

10:31 AM Jun 28, 2023 | Team Udayavani |

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿ.ಪಂ., ತಾ.ಪಂ. ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲದಂತಾಗಿದೆ. ಈಗಿನ ಸ್ಥಿತಿ ನೋಡಿದರೆ ಲೋಕಸಭೆ ಚುನಾವಣೆಗೆ ಮೊದಲು ಜಿ.ಪಂ-ತಾ.ಪಂ ಚುನಾವಣೆಗಳು ನಡೆಯುವುದು ಅನುಮಾನ ಎಂಬಂತಾಗಿದೆ.

Advertisement

ಏಕೆಂದರೆ, ಜಿ.ಪಂ. ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗದ ವರದಿಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಇದೇ ವರ್ಷ ಮಾರ್ಚ್‌ ಆರಂಭದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಹೊರಡಿಸಲಾಗಿತ್ತು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆ ತಟಸ್ಥಗೊಂಡಿತ್ತು. ಈಗ ಹೊಸ ಸರ್ಕಾರ ಬಂದಿದೆ. ಕ್ಷೇತ್ರ ಪುನರ್‌ ವಿಂಗಡಣೆ ವರದಿಗೆ ಅನುಮೋದನೆ ಕೊಡಬೇಕಾಗಿದೆ. ಬಳಿಕವಷ್ಟೇ ಮೀಸಲಾತಿ ಪ್ರಕ್ರಿಯೆ ಪ್ರಾರಂಭಿಸಬೇಕಾಗುತ್ತದೆ.

ಈ ಮಧ್ಯೆ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಜಿ.ಪಂ., ತಾ.ಪಂ. ಮೀಸಲಾತಿ ವಿಚಾರ ಇದಕ್ಕೆ ತಳಕು ಹಾಕಿಕೊಂಡಿದೆ. ಜಿ.ಪಂ., ತಾ.ಪಂ. ಮೀಸಲಾತಿಯನ್ನು 2023ರ ಏಪ್ರಿಲ್‌ಗೆ ಅಂತಿಮಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಸಮಿತಿ ಇನ್ನೂ ವರದಿಯೇ ಕೊಟ್ಟಿಲ್ಲ.

ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಈಗ ಎರಡು ತಿಂಗಳು ಕಳೆದಿದೆ. ಮೀಸಲಾತಿ ವಿಚಾರದಲ್ಲಿ ಇನ್ನೂ ಯಾವುದೇ ಪ್ರಗತಿ ಆಗಿಲ್ಲ. ಮತದಾರರ ಪಟ್ಟಿ ತಯಾರು ಮಾಡುವ ಕೆಲಸ ರಾಜ್ಯ ಚುನಾವಣಾ ಆಯೋಗ ಆರಂಭಿಸಿದೆ. ಆದರೆ, ಸರ್ಕಾರದಿಂದ ಮೀಸಲಾತಿ ಪಟ್ಟಿ ಬರುವವರೆಗೆ ಆಯೋಗ ಮುಂದಕ್ಕೆ ಹೋಗುವಂತಿಲ್ಲ. ಅಂತಿಮ ಮೀಸಲಾತಿ ಪ್ರಕಟಗೊಂಡ ಬಳಿಕ ಮತ್ತೆ ಕಾನೂನು ಸಮಸ್ಯೆಗಳು ಉದ್ಭವಿಸಬಹುದು. ಈ ಎಲ್ಲಾ ಕಾರಣಗಳಿಗೆ ಜಿ.ಪಂ. ತಾ.ಪಂ ಚುನಾವಣೆ ಯಾವಾಗ ನಡೆಯಬಹುದು ಎಂದು ಹೇಳಲಾಗದ ಸ್ಥಿತಿ ಇದೆ.

ಸಾಲು ಸಾಲು ಸಬೂಬುಗಳು: ರಾಜ್ಯದಲ್ಲಿ ಜಿ.ಪಂ., ತಾ.ಪಂ.ಗಳಿಗೆ 2021ರ ಏಪ್ರಿಲ್‌ -ಮೇ ತಿಂಗಳಲ್ಲಿ ಅವಧಿ ಪೂರ್ಣಗೊಂಡಿತ್ತು. ಮೊದಲು ಕೊರೊನಾ ಕಾರಣಕ್ಕೆ ಚುನಾವಣೆ ಆಗಿರಲಿಲ್ಲ. ನಂತರ, ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತು. ಈ ಮಧ್ಯೆ, ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್‌ ಪಡೆದು ರಾಜ್ಯ ಸರ್ಕಾರ ಹೊಸದಾಗಿ ಸೀಮಾ ನಿರ್ಣಯ ಆಯೋಗ ರಚಿಸಿತು. ಈ ಆಯೋಗವು ಎರಡು ವರ್ಷ ಪ್ರಹಸನ ನಡೆಸಿ ಕೊನೆಗೂ ಈ ವರ್ಷ ಮಾರ್ಚ್‌ನಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಹೊರಡಿಸಿತು. ಅಷ್ಟರಲ್ಲೇ ವಿಧಾನಸಭೆ ಚುನಾವಣೆ ಘೋಷಣೆ ಆಯಿತು. ಹಾಗಾಗಿ, ಜಿ.ಪಂ., ತಾ.ಪಂ ಚುನಾವಣೆ ನನೆಗುದಿಗೆ ಬಿತ್ತು. ಈ ವಿಚಾರದಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಅನೇಕ ಸಬೂಬುಗಳನ್ನು ಹೇಳುತ್ತಲೇ ಬಂತು. ಇದಕ್ಕಾಗಿ ಹೈಕೋರ್ಟ್‌ ಸರ್ಕಾರಕ್ಕೆ ಅನೇಕ ಬಾರಿ ಚಾಟಿ ಬೀಸಿದೆ, ಛೀಮಾರಿ ಹಾಕಿದೆ. 5 ಲಕ್ಷ ರೂ. ದಂಡ ಸಹ ಹಾಕಿತ್ತು.

Advertisement

ಇಂದು ವಿಚಾರಣೆ?

ಪ್ರಕರಣ ಹೈಕೋರ್ಟ್‌ ನಲ್ಲಿ 2023ರ ಮೇ 29ಕ್ಕೆ ವಿಚಾರಣೆಗೆ ಬಂದಿದ್ದಾಗ ಈಗಷ್ಟೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಚಿವರಿಗೆ ಖಾತೆಗಳ ಹಂಚಿಕೆಯಾಗಿದ್ದು, ಜಿ.ಪಂ., ತಾ.ಪಂ ಚುನಾವಣೆಗೆ ಸಂಬಂಧಿಸಿದ ಇಲಾಖೆಯ ಸಚಿವರು ಇನ್ನಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ. ಜಿ.ಪಂ., ತಾ.ಪಂ. ಚುನಾವಣೆ, ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶದಲ್ಲಿನ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅದನ್ನು ಪಾಲಿಸಲು ಸ್ವಲ್ಪ ಸಮಯ ಬೇಕು. ಅದಕ್ಕಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕೆಂದು ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿತ್ತು.

ಈಗ ಪ್ರಕರಣ ಬುಧವಾರ (ಜೂ.28ಕ್ಕೆ) ವಿಚಾರಣೆಗೆ ಬರಲಿದೆ. ಆದರೆ, ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಕೋರ್ಟ್‌ಗೆ ಹಿಂದೆ ಹೇಳಿದ್ದನ್ನೇ ಮತ್ತೂಮ್ಮೆ ಹೇಳಬೇಕಾಗಬಹುದು. ನ್ಯಾಯಾಲಯ ಏನು ನಿರ್ದೇಶನ ನೀಡುತ್ತದೆ ಎಂದು ಕಾದು ನೋಡಬೇಕು ಎಂದು ಸ್ವತಃ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದರೆ, ಈ ಕ್ಷಣದವರೆಗೆ ಸರ್ಕಾರದಿಂದ ಆಯೋಗಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ಹೇಳುತ್ತಿವೆ

ಜಿಪಂ ಕ್ಷೇತ್ರ ಏರಿಕೆ

ಕರ್ನಾಟಕ ಸೀಮಾ ನಿರ್ಣಯ ಆಯೋಗ ರಾಜ್ಯದ ಜಿಪಂ ಮತ್ತು ತಾಪಂ ಕ್ಷೇತ್ರಗಳಿಗೆ “ಭೌಗೋಳಿಕ ಗಡಿ’ ನಿಗದಿಪಡಿಸಿ ಈ ವರ್ಷ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಈಗ ರಾಜ್ಯದಲ್ಲಿ 1,117 ಜಿ.ಪಂ ಹಾಗೂ 3,663 ತಾ.ಪಂ. ಕ್ಷೇತ್ರಗಳಾಗಿವೆ. ಆಯೋಗ ಕ್ಷೇತ್ರ ಪುನರ್‌ವಿಂಗಡಣೆ ಕರಡು ಅಧಿಸೂಚನೆಯನ್ನು ಜನವರಿಯಲ್ಲಿ ಪ್ರಕಟಿಸಿತ್ತು ಆಗ 1,117 ಜಿ.ಪಂ ಹಾಗೂ 3,649 ತಾ.ಪಂ. ಕ್ಷೇತ್ರಗಳಿದ್ದವು. ರಾಜ್ಯ ಚುನಾವಣಾ ಆಯೋಗ 2021ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದ್ದಾಗ ಜಿ.ಪಂ ಕ್ಷೇತ್ರಗಳು 1,192 ಮತ್ತು ತಾ.ಪಂ ಕ್ಷೇತ್ರಗಳು 3,298 ಇದ್ದವು. ಅಂತಿಮವಾಗಿ ಜಿ.ಪಂ. ಸಂಖ್ಯೆ ಏರಿಕೆಯಾಗಿದ್ದರೆ, ತಾ ಪಂ. ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗಿದೆ.

ರಫೀಕ್ ಅಹ್ಮದ್

Advertisement

Udayavani is now on Telegram. Click here to join our channel and stay updated with the latest news.

Next