Advertisement
ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಒಂದು ಸಾವಿರ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಜಾರಿಗೆ ತಂದಿರುವ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಂಡಿಲ್ಲ.ಪ್ರತಿ ಗ್ರಾಮಕ್ಕೆ 1ಕೋಟಿ ರೂ.ಗಳಂತೆ ಒಟ್ಟು ಒಂದು ಸಾವಿರ ಕೋಟಿ ರೂ. ಅನುದಾನದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಸಾವಿರ ಗ್ರಾಮಗಳ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು 2017-18ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಘೋಷಿಸಲಾಗಿತ್ತು. ಮೊದಲ ವರ್ಷಕ್ಕೆ 875 ಗ್ರಾಮಗಳಿಗೆ ಅನುಮೋದನೆ ಕೊಟ್ಟು, 300 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಅದರಲ್ಲಿ 189 ಕೋಟಿ ರೂ. ಹಣ ಬಿಡುಗಡೆಯೂ ಆಗಿತ್ತು. ಆದರೆ, ಖರ್ಚು ಆಗಿದ್ದು ಬರೀ 81 ಕೋಟಿ ರೂ. ಮಾತ್ರ.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಎರಡು ವರ್ಷಗಳಲ್ಲಿ ಸಾವಿರ ಗ್ರಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಯೋಜನೆಯ ಕ್ರಿಯಾ ಯೋಜನೆ, ರೂಪುರೇಷೆ ಎಲ್ಲವೂ ಸ್ಪಷ್ಟವಾಗಿದೆ. ಒಂದು ಗ್ರಾಮಕ್ಕೆ 1ಕೋಟಿಯಂತೆ 4 ಗ್ರಾಮಗಳಿಗೆ ಒಬ್ಬ ಶಾಸಕರಿಗೆ 4 ಕೋಟಿ ರೂ. ಅನುದಾನ ಸಿಗಲಿದೆ. ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತಾವನೆ ಕೊಟ್ಟರೆ, ಅನುಮೋದನೆ ನೀಡಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯ. ಆದರೆ, ಅನೇಕ ಬಾರಿ ಮನವಿ, ಮನವರಿಕೆ ಮಾಡಿಕೊಟ್ಟರೂ ಗ್ರಾಮಗಳ ಪಟ್ಟಿ ಕೊಡಲು ಶಾಸಕರು ವಿಳಂಬ ಮಾಡಿದ್ದಾರೆ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
Related Articles
ಆಯ್ಕೆಯಾದ ಗ್ರಾಮಗಳಲ್ಲಿ ಯೋಜನೆಯ ಅನುದಾನದ ಜೊತೆಗೆ ಉದ್ಯೋಗ ಖಾತರಿ ಯೋಜನೆ ಮೂಲಕ ಹೆಚ್ಚುವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೇ, ಮುಖ್ಯಮಂತ್ರಿಯವರ 21 ಅಂಶಗಳ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಗೊಳಿಸುವುದು, ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಯೋಜನೆಯ ಉದ್ದೇಶವಾಗಿದೆ.
Advertisement
ಹಣ ಬಿಡುಗಡೆ ವಿಳಂಬಬೆಳಗಾವಿ ಜಿಲ್ಲೆಯ 17 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ 66 ಗ್ರಾಮಗಳಿಗೆ ಬಿಡುಗಡೆಯಾಗಿದ್ದ 17 ಕೋಟಿ ರೂ. ಅನುದಾನದಲ್ಲಿ 10 ಕೋಟಿ ರೂ. ವೆಚ್ಚ ಆಗಿದ್ದು ಬಿಟ್ಟರೆ, ಬೀದರ್ ಜಿಲ್ಲೆಯ 25 ಗ್ರಾಮಗಳ 25 ಕೋಟಿ ರೂ. ಅನುದಾನದಲ್ಲಿ 6 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಹಾಗೇ ಹಣ ಖರ್ಚು ಮಾಡಲಾಗಿದೆ. ತುಮಕೂರು ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರಮವಾಗಿ 5 ಮತ್ತು 4 ಕೋಟಿ ರೂ. ವೆಚ್ಚವಾಗಿದೆ. ಉಳಿದಂತೆ ಏಳು ಜಿಲ್ಲೆಗಳಲ್ಲಿ 3 ಕೋಟಿ, 16 ಜಿಲ್ಲೆಗಳಲ್ಲಿ 2 ಕೋಟಿ, ಚಾಮರಾಜನಗರ ಜಿಲ್ಲೆಯಲ್ಲಿ 1 ಕೋಟಿ ರೂ. ವೆಚ್ಚ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ 16 ಗ್ರಾಮಗಳಿಗೆ 4 ಕೋಟಿ ರೂ. ಬಿಡುಗಡೆ ಆಗಿದ್ದರೂ, ನಯಾ ಪೈಸೆ ಖರ್ಚಾಗಿಲ್ಲ. ಈ ಮಾಹಿತಿ 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲೇ ನೀಡಲಾಗಿದೆ. ಗ್ರಾಮಗಳ ಅಭಿವೃದ್ಧಿ ಹೆಸರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಜಾರಿಗೆ ತಂದಿರುವ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅನುಷ್ಠಾನಗೊಳ್ಳದೇ ವಿಫಲವಾಗಿರುವುದು ಆಡಳಿತಯಂತ್ರ ಸ್ಥಗಿತಗೊಂಡಿದೆ ಅನ್ನುವುದಕ್ಕೆ ಉದಾಹರಣೆ.
– ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ವಿಧಾನಪರಿಷತ್ ಸದಸ್ಯ. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಹಂಚಿಕೆಯಾದ ಗ್ರಾಮಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕೊಟ್ಟ ಹಣ ವೆಚ್ಚ ಆಗಿದ್ದು, ಹೊಸ ಕ್ರೀಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
– ಶಿವರಾಜ್ ತಂಗಡಗಿ, ಕಾಂಗ್ರೆಸ್ ಶಾಸಕ. ನನ್ನ ಕ್ಷೇತ್ರದ ಐದು ಗ್ರಾಮಗಳಿಗೆ ತಲಾ 20 ಸಾವಿರ ರೂ.ಗಳಂತೆ 1ಲಕ್ಷ ರೂ. ಹಣ ಬಿಡುಗಡೆಯಾಗಿದೆ. ವೆಚ್ಚದ ದಾಖಲೆಗಳನ್ನು ಸಲ್ಲಿಸಿದರೆ ಮುಂದಿನ ಅನುದಾನ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
– ಎನ್.ಎಚ್. ಕೋನರೆಡ್ಡಿ, ಜೆಡಿಎಸ್ ಶಾಸಕ. – ರಫೀಕ್ ಅಹ್ಮದ್