Advertisement

ಗ್ರಾಮಗಳ ಅಭಿವೃದ್ಧಿಯ ಹರಿಕಾರ’ಕೆ.ಎಂ. ಉಡುಪ ಇನ್ನಿಲ್ಲ

10:44 PM Jul 27, 2019 | sudhir |

ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ, ಸ್ವ ಉದ್ಯೋಗ, ಕೃಷಿ, ಹೈನುಗಾರಿಕೆಗಳಿಗೆ ಪ್ರೋತ್ಸಾಹ, ಸ್ವ ಉದ್ಯೋಗಕ್ಕೆ ಬೇಕಾದ ತರಬೇತಿ, ಸೌರ ವಿದ್ಯುತ್‌ ಬಳಕೆಗೆ ಪ್ರೇರಣೆ ಹೀಗೆ ವಿವಿಧ ಆಯಾಮಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಕಾರ್ಕಡ ಮಂಜುನಾಥ ಉಡುಪ (81) ಅಸೌಖ್ಯದಿಂದ ಜು. 27ರಂದು ನಿಧನಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

Advertisement

ಬಿಎಸ್ಸಿ (ಕೃಷಿ) ಪದವೀಧರರಾದ ಉಡುಪರು ಅನಂತರ ಕಟಕ್‌ನ ಕೇಂದ್ರೀಯ ಸಂಸ್ಥೆಯಲ್ಲಿ ಭತ್ತದ ಕುರಿತು ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದು ಕೃಷಿ ಇಲಾಖೆಯಲ್ಲಿ ಭತ್ತದ ಬೆಳೆಯ ಸಂಶೋಧನಾಧಿಕಾರಿಯಾಗಿ 1959ರಿಂದ 65ರ ವರೆಗೆ ಕಾರ್ಯನಿರ್ವಹಿಸಿದರು. ಟಿ.ಎ. ಪೈಯವರ ಪ್ರೇರಣೆಯಿಂದ ಸಿಂಡಿಕೇಟ್‌ ಬ್ಯಾಂಕ್‌ಗೆ 1967ರಲ್ಲಿ ಸೇರ್ಪಡೆಯಾಗಿ 1989ರವರೆಗೆ ಬ್ಯಾಂಕಿನ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಿಂಡಿಕೇಟ್‌ ಬ್ಯಾಂಕ್‌ ಮುಖಾಂತರ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಾಲ ಯೋಜನೆಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಾಮೀಣ ಬ್ಯಾಂಕಿನ ಮುಖಾಂತರ ತನ್ನ ಸೇವಾವಧಿಯಲ್ಲಿ ಸೌರ ಉಪಕರಣಗಳಿಗೆ ಗ್ರಾಮೀಣ ಬ್ಯಾಂಕುಗಳಿಂದ ಸಾಲ ನೀಡುವ ಯೋಜನೆಯನ್ನು ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಅನುಷ್ಠಾನ ಗೊಳಿಸಿದರು.

ಸಾಧನೆಗಳು
ಸಿಂಡಿಕೇಟ್‌ ಬ್ಯಾಂಕ್‌ನ ಕಾರವಾರ, ಬೆಂಗಳೂರು ಪ್ರಾದೇಶಿಕ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಬಳಿಕ ಪದೋನ್ನತಿ ಹೊಂದಿ ಹೈದರಾಬಾದ್‌ ವಲಯದ ಉಪ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ ಅಲ್ಲಿ ನಿವೃತ್ತಿಯಾದರು. ಬ್ಯಾಂಕಿನ ಮುಖಾಂತರ ಫಾರ್ಮ, ಕ್ಲಿನಿಕ್‌, ಸಣ್ಣ ಜಮೀನುಗಳ ಅಭಿವೃದ್ಧಿಗೆ ಸಮರ್ಥ ನಿರ್ವಹಣಾ ಯೋಜನಗೆಳು, ರೈತರಿಗೆ ಸುಲಭ ಸಾಲ ಸೌಲಭ್ಯ ಯೋಜನೆ, ಗೋಬರ್‌ ಅನಿಲ ಪ್ರಚಾರ ಹಾಗೂ ರೈತರಿಗೆ ಸಾಲ ಯೋಜನೆ, ಸಮಗ್ರ ಗ್ರಾಮೀಣಾಭಿವೃದ್ಧಿ ಶಾಖೆಗಳ ಸ್ಥಾಪನೆ ಮಾಡಿದ್ದರು. ಬ್ಯಾಂಕಿನ ಸೇವಾವಧಿಯಲ್ಲಿ ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಜಪಾನ್‌, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಹಾಂಕಾಂಗ್‌, ಶ್ರೀಲಂಕಾ, ಥೈಲ್ಯಾಂಡ್‌, ಮನಿಲಾ, ಸಿಂಗಾಪುರ ದೇಶಗಳ ಕಾರ್ಯಾಗಾರ ಹಾಗೂ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದರು.

ಸಂಘ-ಸಂಸ್ಥೆಗಳಲ್ಲಿ
ನಿವೃತ್ತಿಯ ಬಳಿಕ ಸೆಲ್ಕೋ ಸಂಸ್ಥೆಯ ನಿರ್ದೇಶಕರಾಗಿ ಡಾ| ಹರೀಶ್‌ ಹಂದೆ ಅವರ ಜತೆ ಗ್ರಾಮೀಣ ಪ್ರದೇಶದ ಜನರ ಮನೆಗಳಿಗೆ ಸೌರ ದೀಪ ಒದಗಿಸುವಲ್ಲಿ ಮಹತ್ತರ ಕೊಡುಗೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ, ರುಡ್‌ಸೆಟ್‌ ಆಡಳಿತ ಮಂಡಳಿಯ ಸದಸ್ಯರಾಗಿ, ಸಿಂಡಿಕೇಟ್‌ ಕೃಷಿ ಮತ್ತು ಗ್ರಾಮೀಣಾಭಿವೃಧಿœ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಹಾಗೂ ಸುಮಾರು ಎರಡು ದಶಕಗಳ ಕಾಲ ಕಾರ್ಯದರ್ಶಿಯಾಗಿ, ಟಿ.ಎ. ಪೈಯವರಿಂದ ಸ್ಥಾಪಿಸಲ್ಪಟ್ಟ ಭಾರತೀ¿å ವಿಕಾಸ ಟ್ರಸ್ಟಿನ ಟ್ರಸ್ಟಿಯಾಗಿ ಅನಂತರ 2003ರಿಂದ ಆಡಳಿತ ವಿಶ್ವಸ್ತರಾಗಿ ಈವರೆಗೂ ಸೇವೆ ಸಲ್ಲಿಸುತ್ತಿದ್ದರು. ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಕೆ.ಕೆ. ಪೈ ಅವರಿಗೆ ನಿಕಟ ಸಂಪರ್ಕ ಹೊಂದಿದ್ದ ಉಡುಪರು ಕೆ.ಕೆ. ಪೈ ಪ್ರತಿಷ್ಠಾನದ ಟ್ರಸ್ಟಿಗಳಾಗಿಯೂ ಸೇವೆ ಸಲ್ಲಿಸಿದ್ದರು.
ಉಡುಪರು ತಂದೆಯವರಿಂದ ಸ್ಥಾಪಿಸಲ್ಪಟ್ಟ ಮಂದಾರ್ತಿ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಭಾರತದ ವಾಣಿಜ್ಯ ಬ್ಯಾಂಕ್‌ಗಳು ಸೌರ ಬೆಳಕಿನ ವ್ಯವಸ್ಥೆಗೆ ಹಣಕಾಸು ಒದಗಿಸುವ ಯೋಜನೆಯನ್ನು ರೂಪಿಸುವಲ್ಲಿ ಉಡುಪರು ಪ್ರಮುಖ ಪಾತ್ರ ವಹಿಸಿದ್ದಾರೆ. 1995ರಲ್ಲಿ ನ್ಯೂಯಾರ್ಕ್‌ನ ಪೊಕಾಂಟಿಕೊ ಕೇಂದ್ರದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು, ಬ್ಯಾಂಕುಗಳು ಸೌರ ಉಪಕರಣಗಳಿಗೆ ಹಣಕಾಸು ಒದಗಿಸುವ ಬಗ್ಗೆ ಪ್ರಬಂಧವನ್ನು ಮಂಡಿಸಿದ್ದರು. ನಿವೃತ್ತಿಯ ಬಳಿಕ ದೇಶದ ಹಲವಾರು ಟ್ರಸ್ಟ್‌ಗಳ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ದಿ| ಟಿ.ಎ. ಪೈ ಅವರಿಂದ ಪ್ರಭಾವಿತರಾಗಿದ್ದ ಉಡುಪರು ಡಾ| ಟಿ.ಎಂ.ಎ. ಪೈ ಮತ್ತು ಮಣಿಪಾಲದ ಪೈ ಬಂಧುಗಳ ಎಲ್ಲ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸೇವೆಗಳಲ್ಲಿ ತಮ್ಮ ಕೊಡುಗೆ ನೀಡಿದ್ದರು.

ಸಂತಾಪ
ಉಡುಪ ಅವರ ನಿಧನಕ್ಕೆ ಪೇಜಾವರ ಮಠಾಧೀಶರು, ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್‌, ಮಣಿಪಾಲ ಪೈ ಕುಟುಂಬದ ಮೋಹನದಾಸ್‌ ಪೈ, ರಾಮದಾಸ ಪೈ, ಸತೀಶ್‌ ಪೈ, ಸಂಧ್ಯಾ ಪೈ, ನಾರಾಯಣ ಪೈ, ಅಶೋಕ್‌ ಪೈ, ಗೌತಮ್‌ ಪೈ, ಸಚಿನ್‌ ಪೈ ಮತ್ತು ಕೆ.ಕೆ. ಪೈ ಪ್ರತಿಷ್ಠಾನದ ಟ್ರಸ್ಟಿ ಸುರೇಶ್‌ ಪೈ, ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಎಚ್‌.ಎಸ್‌. ಬಲ್ಲಾಳ್‌, ವಿನೋದ್‌ ಭಟ್‌, ಸೆಲ್ಕೊ ಸಂಸ್ಥೆಯ ಮುಖ್ಯಸ್ಥ ಡಾ| ಹರೀಶ್‌ ಹಂದೆ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Advertisement

ಇಂದು ಅಂತ್ಯ ಸಂಸ್ಕಾರ
ಕೆ.ಎಂ. ಉಡುಪರ ಅಂತ್ಯ ಸಂಸ್ಕಾರ ಅವರ ಸ್ವ ಗ್ರಾಮ ಮಂದರ್ತಿಯಲ್ಲಿ ಜು. 28ರ ಮಧ್ಯಾಹ್ನ 11:30 ಕ್ಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next