Advertisement

ನಾಳೆಯಿಂದ ಗ್ರಾಮ ನ್ಯಾಯಾಲಯ ಆರಂಭ

11:34 PM Mar 11, 2020 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹಾಗೂ ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ ರಾಜ್ಯ ಗ್ರಾಮ ನ್ಯಾಯಾಲಯಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಮಾ.13ರಂದು ಗ್ರಾಮ ನ್ಯಾಯಾಲಯಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಕಕ್ಷಿದಾರರಿಗೆ ಮನೆಯ ಬಾಗಿಲಲ್ಲೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಜನರ ಹಂತದಲ್ಲೇ ಸಂಪೂರ್ಣ ನ್ಯಾಯದಾನ ಮಾಡುವ ಉದ್ದೇಶದಿಂದ 2008ರಲ್ಲಿ ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

Advertisement

ಈ ನಿಟ್ಟಿನಲ್ಲಿ ಪ್ರಕರಣಗಳ ವಿಚಾರವಾಗಿ ಕಕ್ಷಿದಾರರು ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮ ನ್ಯಾಯಾಲಯಗಳನ್ನು ಪ್ರಾಥಮಿಕವಾಗಿ ಮಂಡಿಕಲ್ಲಿನಲ್ಲಿ ರುವ ಕರ್ನಾಟಕ ಪಬ್ಲಿಕ್‌ ಕಾಲೇಜು ಹಾಗೂ ಹೊಸೂರಿನಲ್ಲಿರುವ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಪ್ರಾರಂಭಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆ ಮುಂದಾಗಿದೆ. ಸಿವಿಲ್‌ ನ್ಯಾಯಾಧೀಶರನ್ನು ಗ್ರಾಮ ನ್ಯಾಯಾಲಯಕ್ಕೆ ನ್ಯಾಯಾಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ.

ಈ ನ್ಯಾಯಾಲಯಕ್ಕೆ ನೇಮಕಗೊಳ್ಳುವ ನ್ಯಾಯಾಧೀಶರನ್ನು ನ್ಯಾಯಾಧಿಕಾರಿ ಎಂದು ಕರೆಯಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಗ್ರಾಮ ನ್ಯಾಯಾಲಯದ ನ್ಯಾಯಾಧಿಕಾರಿಗಳು ಪ್ರಕರಣವನ್ನು ಸ್ಥಳದಲ್ಲಿಯೇ ಇತ್ಯರ್ಥ ಗೊಳಿಸುವ ಅಧಿಕಾರ ಹೊಂದಿರುತ್ತಾರೆ. ಗ್ರಾಮ ನ್ಯಾಯಾಲಯದಡಿ 50 ಸಾವಿರ ರೂ.ಗಳಿಗೆ ಒಳಪಟ್ಟ ಸಿವಿಲ್‌ ಪ್ರಕರಣಗಳು, 20 ಸಾವಿರ ರೂ.ಗಳಿಗೆ ಒಳಪಟ್ಟ ಕಳ್ಳತನ ಪ್ರಕರಣಗಳು, 2 ವರ್ಷಗಳ ಕಾಲದ ಜೈಲುವಾಸ ಪ್ರಕರಣಗಳು, ಕೌಟುಂಬಿಕ ಕಲಹ ಪ್ರಕರಣಗಳನ್ನು ವಿಚಾರಣೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next