Advertisement

ಗ್ರಾಮ ಸಭೆಗೆ ತಾ.ಪಂ. ಸದಸ್ಯರು ಗೈರು: ಸಾರ್ವಜನಿಕರ ಆಕ್ರೋಶ

09:28 PM Jul 17, 2019 | Team Udayavani |

ವಿಟ್ಲ: ತಾಲೂಕು ಪಂಚಾಯತ್‌ ಸದಸ್ಯರು ಎರಡು ವರ್ಷಗಳಿಂದ ಗ್ರಾಮ ಸಭೆ ಗೈರು ಹಾಜರಾಗುತ್ತಿದ್ದಾರೆ. ಜಿಲ್ಲಾ ಪಂಚಾಯತ್‌ ಸದಸ್ಯರೂ ಈ ಗ್ರಾಮ ಸಭೆಗೆ ಗೈರು ಹಾಜರಾಗಿದ್ದಾರೆ. ಅವರು ಬಾರದೇ ಗ್ರಾಮ ಸಭೆ ನಡೆಸಲು ಬಿಡುವುದಿಲ್ಲ ಎಂದು ಅಳಿಕೆ ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಮಂಗಳವಾರ ಸಂಭವಿಸಿದೆ.

Advertisement

ಅಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದಾಗ ಈ ಬಗ್ಗೆ ಸ್ಪಷ್ಟನೆ ನೀಡಿದ ಅಧ್ಯಕ್ಷರು ಗ್ರಾಮ ಸಭೆಗೆ ಅವರಿಗೆ ನೋಟಿಸ್‌ ನೀಡಲಾಗುತ್ತಿದೆ. ಅವರು ಆಗ ಮಿಸಿಲ್ಲ. ಜನರ ಬೇಡಿಕೆಗಳನ್ನು ಅವರಿಗೆ ತಿಳಿಸಲಾಗುವುದು ಎಂದರು. ತಾ.ಪಂ. ಸದಸ್ಯ ಮುಂದಿನ ಗ್ರಾಮ ಸಭೆಗೆ ಹಾಜರಾಗದಿದ್ದಲ್ಲಿ ಗ್ರಾಮ ಸಭೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಅಳಿಕೆ ಗ್ರಾಮದಲ್ಲಿ ಅಪಾಯಕಾರಿ ವಿದ್ಯುತ್‌ ತಂತಿಗಳಿವೆ. ಮಳೆಗಾಲದಲ್ಲಿ ಅದು ನೆಲಕ್ಕೆ ಬೀಳುವ ಹಂತದಲ್ಲಿ ತತ್‌ಕ್ಷಣವೇ ಅವುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪುತ್ತೂರು, ವಿಟ್ಲ, ಅಳಿಕೆ, ಕನ್ಯಾನ, ಆನೆಕಲ್ಲು, ಬಾಕ್ರಬೈಲು, ಮುಡಿಪು, ದೇರಳಕಟ್ಟೆ ಮೂಲಕ ಮಂಗಳೂರಿಗೆ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಒದಗಿಸಬೇಕು. ಈ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ, ತತ್‌ಕ್ಷಣವೇ ತಂತಿಗಳನ್ನು ಬದಲಾಯಿಸಬೇಕು. ಶಾರದಾ ವಿಹಾರದ ಸಮೀಪ ಮರ ಎಚ್‌ಟಿ ಲೈನ್‌ನ ಮೇಲೆ ಬೀಳುವ ಹಂತದಲ್ಲಿದೆ. ಇದರಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಬಹುದು. ಸಮಸ್ಯೆ ಆದ ಮೇಲೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ದಾರಿ ದೀಪಗಳ ಬಗ್ಗೆ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಅವರು, ದಾರಿ ದೀಪದ ಜವಾಬ್ದಾರಿ ಜನರ ಮೇಲೆಯೂ ಇದೆ. ಸರಕಾರಿ ಸವಲತ್ತುಗಳನ್ನು ದುರುಪಯೋಗಪಡಿಸಬಾರದು. ಅದರ ಬಗ್ಗೆ ಕಾಳಜಿ ವಹಿಸಬೇಕು ಎಂದರು.

Advertisement

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ ನೋಡಲ್‌ ಅಧಿಕಾರಿಯಾಗಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅಳಿಕೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಸರಸ್ವತಿ, ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಎಲ್‌ಕೆಜಿ, ಯುಕೆಜಿ
ಸರಕಾರಿ ಶಾಲೆಗಳಲ್ಲಿ ನೂತನವಾಗಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಗೊಂಡಿರುತ್ತದೆ. ಮುಂದಿನ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಮಾತ್ರ ಸೀಮಿತವೇ? ಅಥವಾ ಒಂದನೇ ತರಗತಿ ಪ್ರಾರಂಭಿಸುವ ಬಗ್ಗೆ ಯೋಜನೆ ಇದೆಯೇ? ಈ ಬಗ್ಗೆ ಜನರಲ್ಲಿ ಗೊಂದಲವಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಹಾಗೂ ಎಲ್‌ಕೆಜಿ, ಯುಕೆಜಿ ತರಗತಿ ಸೇರಿಸುವ ಮಕ್ಕಳಿಗೆ ವಯಸ್ಸು ನಿಗದಿಪಡಿಸಬೇಕು. ಕೆಲವು ಕಡೆಗಳಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next