Advertisement

ಹಳ್ಳಿ ಹುಡುಗರ ಬಿಲ್‌ಗೇಟ್ಸ್‌ ಕನಸು

10:36 AM Sep 21, 2019 | mahesh |

ಎರಡು ಪಾತ್ರದ ಸುತ್ತ ಸಿನಿಮಾ

Advertisement

“ಬಿಲ್‌ಗೇಟ್ಸ್‌’ ಗೊತ್ತಲ್ಲ. ಮೈಕ್ರೋಸಾಫ್ಟ್ ಎಂಬ ದಿಗ್ಗಜ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನ್‌ ಸಾಹಸಿ. ಇಂದಿಗೂ ಅದೆಷ್ಟೋ ಅಸಂಖ್ಯಾತ ಯುವಕರಿಗೆ, ಉದ್ಯಮಿಗಳಿಗೆ “ಬಿಲ್‌ಗೇಟ್ಸ್‌’ ಎಂಬ ಈ ಹೆಸರು ಪ್ರೇರಣಾದಾಯಿ. ಎಷ್ಟೋ ಮಂದಿ “ಬಿಲ್‌ಗೇಟ್ಸ್‌’ ಅವರನ್ನು ಅನುಕರಿಸುವುದು, ತಮ್ಮ ಮಕ್ಕಳಿಗೆ ಅವರ ಹೆಸರಿಟ್ಟಿರುವುದನ್ನು ಕೇಳಿದ್ದೇವೆ. ಇನ್ನು ಕನ್ನಡ ಚಿತ್ರರಂಗ ಕೂಡ “ಬಿಲ್‌ಗೇಟ್ಸ್‌’ ಹೆಸರಿನಿಂದ ಸ್ಫೂರ್ತಿ ಪಡೆದುಕೊಂಡಿದೆ. ಹೌದು, ಈಗ ಕನ್ನಡದಲ್ಲಿ “ಬಿಲ್‌ಗೇಟ್ಸ್‌’ ಹೆಸರಿನಲ್ಲಿ ಸಿನಿಮಾವೇ ತಯಾರಾಗುತ್ತಿದೆ. ಕಳೆದ ವರ್ಷ ಸದ್ದಿಲ್ಲದೆ ಸೆಟ್ಟೇರಿದ್ದ “ಬಿಲ್‌ಗೇಟ್ಸ್‌’ ಚಿತ್ರ ಇದೀಗ ತನ್ನೆಲ್ಲ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ.

ಅಂದಹಾಗೆ, ಈ ಚಿತ್ರದ ಹೆಸರು “ಬಿಲ್‌ಗೇಟ್ಸ್‌’ ಅಂತಿದ್ದರೂ, ಇದು “ಬಿಲ್‌ಗೇಟ್ಸ್‌’ ಅವರ ಬಯೋಪಿಕ್‌ ಚಿತ್ರವಂತೂ ಅಲ್ಲ. ಚಿತ್ರದ ಹೆಸರು ಮತ್ತು “ಬಿಲ್‌ಗೇಟ್ಸ್‌’ ಅವರ ಹೆಸರು ಒಂದೇ ಥರ ಇದೆ ಅನ್ನೋದನ್ನ ಬಿಟ್ಟರೆ ಚಿತ್ರಕ್ಕೂ, “ಬಿಲ್‌ಗೇಟ್ಸ್‌’ಗೂ ಯಾವುದೇ ಸಂಬಂಧವಿಲ್ಲ!

ಇತ್ತೀಚೆಗೆ “ಬಿಲ್‌ಗೇಟ್ಸ್‌’ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಮುಂದಿನ ತಿಂಗಳು “ಬಿಲ್‌ಗೇಟ್ಸ್‌’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

“ಶ್ರೀಪಾಂಚಜನ್ಯ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶ್ರೀನಿವಾಸ್‌ ಸಿ.ಮಂಡ್ಯ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿವಾಸ, “ಚಿತ್ರದ ಹೆಸರು “ಬಿಲ್‌ಗೇಟ್ಸ್‌’ ಅಂತಿದ್ದರೂ, ಚಿತ್ರಕ್ಕೂ ಬಿಲ್‌ಗೇಟ್ಸ್‌ ಅವರ ಜೀವನಕ್ಕೂ ಯಾವುದೇ ಲಿಂಕ್‌ ಇಲ್ಲ. ಚಿತ್ರದಲ್ಲಿ “ಬಿಲ್‌ಗೇಟ್ಸ್‌’ ಹೆಸರನ್ನು ಬಿಲ್‌ ಮತ್ತು ಗೇಟ್ಸ್‌ ಎನ್ನುವ ಎರಡು ಪಾತ್ರಗಳು ಪ್ರತಿನಿಧಿಸುತ್ತವೆ. ಇದೇ ಎರಡು ಪಾತ್ರದ ಸುತ್ತ ಚಿತ್ರದ ಕಥೆ ನಡೆಯುತ್ತದೆ. “ಬಿಲ್‌ಗೇಟ್ಸ್‌’ ನಂತಾಗಬೇಕು ಎಂದು ಹಳ್ಳಿ ಬಿಟ್ಟು ನಗರಕ್ಕೆ ಬರುವ ಇಬ್ಬರು ಹುಡುಗರ ಕಥೆ ಏನಾಗುತ್ತದೆ ಅನ್ನೋದು ಚಿತ್ರದಲ್ಲಿದೆ. ಇಡೀ ಚಿತ್ರವನ್ನು ಕಂಪ್ಲೀಟ್‌ ಕಾಮಿಡಿಯಲ್ಲಿ ಸ್ಕ್ರೀನ್‌ ಮೇಲೆ ತರುತ್ತಿದ್ದೇವೆ. ಈ ಚಿತ್ರದ ಮೂಲಕ ನಿರ್ದೇಶಕನಾಗುವ ನನ್ನ ಕನಸು ನನಸಾಗುತ್ತಿದೆ’ ಎಂಬ ವಿವರಣೆ ನೀಡುತ್ತಾರೆ.

Advertisement

ಇನ್ನು “ಬಿಲ್‌ಗೇಟ್ಸ್‌’ ಚಿತ್ರದಲ್ಲಿ ಬಿಲ್‌ (ಪಾಂಡು) ಮತ್ತು ಗೇಟ್ಸ್‌ (ಗಿರಿ) ಎಂಬ ಎರಡು ಪಾತ್ರದಲ್ಲಿ ಶಿಶಿರ ಶಾಸ್ತ್ರೀ, ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. “ಹಳ್ಳಿಯಲ್ಲಿ ತುಂಟಾಟ ಮತ್ತು ತರಲೆ ಮಾಡಿಕೊಂಡಿದ್ದ ಇಬ್ಬರು ಹುಡುಗರು ತಮ್ಮ ಜೀವನದಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸುತ್ತಾರೆ ಅನ್ನೋದು ನಮ್ಮ ಪಾತ್ರ. ಎರಡೂ ಪಾತ್ರಗಳು ಕಾಮಿಡಿಯಾಗಿ ಜೊತೆಯಲ್ಲೇ ಸಾಗುತ್ತವೆ’ ಎನ್ನುವುದು ಪಾತ್ರದ ಬಗ್ಗೆ ನಟರಾದ ಶಿಶಿರ ಮತ್ತು ಚಿಕ್ಕಣ್ಣ ಅವರ ವಿವರಣೆ. ಉಳಿದಂತೆ ಕುರಿ ಪ್ರತಾಪ್‌, ಗಿರಿ, ರಾಜಶೇಖರ್‌, ಅಕ್ಷರಾ ರೆಡ್ಡಿ, ರಶ್ಮಿತಾ, ರೋಜಾ, ರಾಜೇಶ್‌, ವಿ. ಮನೋಹರ್‌, ಬ್ಯಾಂಕ್‌ ಜನಾರ್ಧನ್‌, ಯತಿರಾಜ್‌, ಪ್ರಿಯಾಂಕಾ ಚಿಂಚೊಳ್ಳಿ ಮೊದಲಾದವರು “ಬಿಲ್‌ಗೇಟ್ಸ್‌’ ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಬಿಲ್‌ಗೇಟ್ಸ್‌’ ಚಿತ್ರಕ್ಕೆ ರಾಕೇಶ್‌ ಸಿ ತಿಲಕ್‌ ಛಾಯಾಗ್ರಹಣ, ಪಿ. ಮರಿಸ್ವಾಮಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ನೋಬಿನ್‌ ಪೌಲ್‌ ಸಂಗೀತವಿದೆ. “ಕಂಪ್ಲೀಟ್‌ ಮನರಂಜನೆ ಜೊತೆ ಒಂದೊಳ್ಳೆ ಮೆಸೇಜ್‌ ಇರುವ “ಬಿಲ್‌ಗೇಟ್ಸ್‌’ ಚಿತ್ರವನ್ನು ಮುಂದಿನ ತಿಂಗಳ ಅಂತ್ಯಕ್ಕೆ ತೆರೆಗೆ ತರುವ ಯೋಚನೆ ಇದೆ’ ಎನ್ನುತ್ತದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next