Advertisement

ಹಳ್ಳಿ ಸೊಗಸು

04:45 PM Jul 04, 2021 | Team Udayavani |

ಹಳ್ಳಿ ಜೀವನವೆಂದರೆ ಬಲು ಸೊಗಸು, ನೀಲಿ ಆಕಾಶ, ಆಗಸದ ತುಂಬೆಲ್ಲ ನಲಿಯುತ್ತ ಉಲಿಯುತ್ತ ಹಾರುವ ಹಕ್ಕಿಗಳು, ಎಲ್ಲೆಂದರಲ್ಲಿ ಕಾಣುವ ಕೆರೆ ತೊರೆಗಳು, ಹಸುರಿನಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು, ಜೀವಕ್ಕೆ ಜೀವ ಕೊಡುವ ನೆರೆಹೊರೆಯವರು. ಕಣ್ಣಾಡಿಸಿದಲ್ಲೆಲ್ಲಾ ಹಸುರು, ಸೂಕ್ಷ್ಮವಾಗಿ ಆಲಿಸಿದಾಗ ಕೇಳುವ ನದಿ ಹರಿಯುವ ಸದ್ದು, ದೂರದಲ್ಲೆಲ್ಲೋ ಇರೋ ಬೆಟ್ಟ ಕಾಣುವಷ್ಟು ಸ್ವತ್ಛಂದ ಆಕಾಶ, ಹಕ್ಕಿಗಳ ಕಲರವ, ಕೆಲವೊಮ್ಮೆ ರಾತ್ರಿಯಾದಾಗ ಆಕಾಶವಾಣಿಯಂತೆ ಕೇಳುವ ಗೂಬೆಯ ಕೂಗು, ಆ ಶಬ್ದಕ್ಕೆ ತಾಳ ಹಾಕುವಂತೆ ಕೇಳುವ ಪುಟ್ಟ ಹುಳದ ದನಿ, ಕತ್ತಲಾದಾಗಲೆಲ್ಲ ಮಿಂಚುವ ಮಿಂಚು ಹುಳಗಳು, ಮಳೆ ಮುನ್ಸೂಚನೆ ನೀಡುವ  ಹಕ್ಕಿಯ ಕೂಗು, ದಪ್ಪ ಕಂಬಳಿಯಂತೆ ಆವರಿಸುವ ಕಾರ್ಮೋಡ, ಮಳೆ ಬಂದಾಗ ಪಸರಿಸುವ ಮಣ್ಣಿನ ಘಮ, ಹೂಗಳ ಪರಿಮಳ ಬೆರೆತು ಬೀಸುವ ತಂಪುಗಾಳಿ, ಒಂದೇ ಸಮನೆ ಸುರಿಯುವ ಮಳೆ, ಇವುಗಳ ನಡುವೆ ತನಗೇನು ತಿಳಿಯದೆ ಗದ್ದೆ ಕಾಯುವ ಬೆದರುಗೊಂಬೆ. ಒಂದೇ ಎರಡೇ ವರ್ಣಿಸುತ್ತಾ ಹೋದರೆ ಪುಟಗಳೆ ಸಾಲದು.

Advertisement

ಪಟ್ಟಣಗಳಿಗೆ ಹೋಲಿಸಿದರೆ ಹಳ್ಳಿಯಲ್ಲಿ ತುಸು ನೆಮ್ಮದಿಯ ಜೀವನ ಕಾಣಬಹುದು. ರೈತನ ಬದುಕು ಮತ್ತು ಸಂಪಾದನೆ ಸಂಪೂರ್ಣವಾಗಿ ಪ್ರಕೃತಿ ನಿಯಮಕ್ಕೆ ಬದ್ಧವಾಗಿರುತ್ತೆ. ಬೆಳಗ್ಗೆ ಎದ್ದಾಗ ಕೇಳುವ ಕೋಳಿಯ ಕೂಗಿನ ಸುಪ್ರಭಾತದಿಂದ ಹಿಡಿದು ಹಳ್ಳಿಯ ಬದುಕಿನಲ್ಲಿ ಎಲ್ಲ ಕೆಲಸಗಳು ಸುತ್ತ ಮುತ್ತಲಿನ ಪರಿಸರಕ್ಕೆ ಅವಲಂಬಿತವಾಗಿರುತ್ತೆ. ಪಟ್ಟಣಕ್ಕಿಂತಲೂ ಹಲವು ಪಟ್ಟು ಹೆಚ್ಚಿನ ಶುದ್ಧ ಗಾಳಿ, ತಾಜಾ ತರಕಾರಿ, ಒಳ್ಳೆಯ ಮನಸ್ಸುಗಳು ಸಿಗುವುದಂತೂ ಸತ್ಯ. ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸುವ ರೂಢಿ ಇಂದಿಗೂ ಜೀವಂತವಾಗಿವೆ. ಮನೆಗಳ ಮುಂದೆ ರಂಗೋಲಿ, ದೇವರ ಮುಂದೆ ನೈವೇದ್ಯ ತಟ್ಟೆ, ಬಾಗಿಲಲ್ಲಿ ತೋರಣಗಳು ಈಗಲೂ ರಾರಾಜಿಸುತ್ತವೆ. ಜಾನಪದ ಕಲೆಗಳಿಗೆ ಹಳ್ಳಿಯೇ ತವರೂರು. ಒಗಟುಗಳು, ಅನುಭವದಿಂದ ಹೊರಹೊಮ್ಮಿದ ಗಾದೆಗಳು ಜೀವನದ ಪಥದಲ್ಲಿ ಸಾಗಲು ಮಾರ್ಗದರ್ಶಿಗಳು. ಹಳ್ಳಿಗರಲ್ಲಿಯ ವಿಶೇಷ ಗುಣವೆಂದರೆ ಒಗ್ಗಟ್ಟು.

ಒಬ್ಬರಿಗೊಬ್ಬರು ಸಹಾಯ ಸಹಕಾರ ಗುಣ, ಹೊಂದಿಕೊಂಡು ಬಾಳುವ ಸದ್ಗುಣ , ತಾಳ್ಮೆ, ಅವಿಭಕ್ತ ಕುಟುಂಬಗಳು, ಜಾನಪದ ಕ್ರೀಡೆಗಳಾದ ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ ಮರಕೋತಿಗಳು, ಅಜ್ಜ-ಅಜ್ಜಿ, ಮಾವ-ಅತ್ತೆ,ಅಕ್ಕ-ಭಾವ, ಅಣ್ಣ ತಮ್ಮ ತಂಗಿ ಚಿಕ್ಕಪ್ಪ ದೊಡ್ಡಪ್ಪ ಹೀಗೆ ಸಂಬಂಧಗಳ ಸವಿ ಕೂಡ ಹಳ್ಳಿ ಜೀವನದ ವಿಶೇಷತೆ.ಹಾಗೆಯೇ ಸಂಜೆ ಕೆಲಸ ಮುಗಿಸಿ ಅಕ್ಕಪಕ್ಕ ಮನೆಯ ಹೆಂಗಸರು ಒಟ್ಟಿಗೆ ಸೇರಿ ಹರಟೆ ಹೊಡೆಯುತ್ತ ಇದ್ದರೆ ಇನ್ನು ಒಂದು ಕಡೆ ಗಂಡಸರು ಬೀಡಿ, ತಂಬಾಕು ಹಾಕುತ್ತಾ ಅಂಗಡಿಗಳ ಮುಂದೆ ಒಟ್ಟಾಗುವುದು  ಸಾಮಾನ್ಯ. ಗದ್ದೆ ತೋಟಗಲ್ಲಿ ಮೈಬಗ್ಗಿಸಿ ಬೆವರು ಹರಿಸಿಯು ಹಳ್ಳಿಗರ ಪದ್ದತಿ, ಆಚರಣೆ, ಆಡಂಬರವಿಲ್ಲದ ಜೀವನ ಸಾಕು ಪ್ರಾಣಿಗಳ ಒಡನಾಟ ಹೀಗೆ ಹತ್ತು ಹಲವಾರು ವಿಷಯಗಳು ವರ್ಣಿಸಲು ಅಸಾಧ್ಯ.

ಮುಂಜಾನೆಯ ಮೊದಲ ಸೂರ್ಯ ರಶ್ಮಿ

ಬುವಿಯ ತಾಗಿದೊಡೆ ಕೋಳಿಯ ಕೂಗಿಗೆ

Advertisement

ಎಚ್ಚೆತ್ತು ಸೆಗಣಿಯ ನೀರಿನಿಂದ ನೆಲವ

ಸಾರಿಸಿ ರಂಗೋಲಿ ಬಿಡುವ ಹೆಂಗಳೆಯರು

ಮುಖವ ತೊಳೆದು ಮುದ್ದೆಯ ಉಂಡು

ಕತ್ತಿಗೆ ಕಟ್ಟಿರುವ ಗಂಟೆಯ ಸದ್ದು ಮಾಡುವ

ಎತ್ತಿಗೆ ನೊಗವ ಕಟ್ಟಿ ಧೂಳೆಬ್ಬಿಸಿಕೊಂಡು

ಹೊಲಕ್ಕೆ ಹೊರಡುವ ರೈತರು. ಎಂದು ಹಳ್ಳಿಗರನ್ನು ಹೋಗಲಿ ರಾಷ್ಟ್ರಕವಿ ಕುವೆಂಪು ಬರೆದಿದ್ದಾರೆ.

 

ಯಶಸ್ವಿನಿ ಸುರೇಂದ್ರ ಗೌಡ, ಕೊಟ್ಟಿಗೆಹಾರ

ಜ್ಞಾನ ಜ್ಯೋತಿ ಟಿ ಎಂ. ಎಸ್‌. ಫ‌ಸ್ಟ್‌ ಗ್ರೇಡ್‌

ಕಾಲೇಜು, ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next