Advertisement
ಯುರೋಪಿಯನ್ನರು ಅಮೆರಿಕಕ್ಕೆ ಕಾಲಿಡುವ ಮುನ್ನ ಮಿಸ್ಸಿಸ್ಸಾಗ ಒಜಿಬ್ವೆ ಎಂಬಲ್ಲಿ ರೆಡ್ ಇಂಡಿಯನ್ ಮೂಲ ನಿವಾಸಿಗಳು ಇಲ್ಲಿ ವಾಸವಾಗಿದ್ದರು. ಕ್ರಮೇಣ ಬ್ರಿಟಿಷರ ಆಗಮನದಿಂದ ಮುಖ್ಯ ವ್ಯಾಪಾರ ಕೇಂದ್ರವಾಗಿ ಇದು ಮಾರ್ಪಟ್ಟಿತು. ಮೀನುಗಾರಿಕೆ, ಬೀವರ್ ಪ್ರಾಣಿಯ ಉಣ್ಣೆ ಸಾಗಣಿಕೆ, ಮರಮಟ್ಟು ವಹಿವಾಟಿಗೆ ಈ ಬಂದರು ಬಹುಬೇಗ ಪ್ರಸಿದ್ಧಿ ಪಡೆಯಿತು. 1834ರಲ್ಲಿ ಬ್ರಿಟಿಷರು ಇದರ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಿದರು. ದೀಪಸ್ತಂಭ ನಿರ್ಮಿಸಿದರು. ಜಲ, ಭೂ ಮಾರ್ಗದೊಂದಿಗೆ ರೈಲು ಮಾರ್ಗವೂ ಈ ಬಂದರನ್ನು ಇತರ ಊರುಗಳೊಂದಿಗೆ ಬೆಸೆಯಿತು. 1847ರಲ್ಲಿ ಇಲ್ಲಿಯ ಮೂಲನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಸರೋವರದ ಕಲ್ಲುಗಳನ್ನು ಬಳಸಿ ಕಟ್ಟಡ ಕಟ್ಟುವ ಕಂಪೆನಿಗಳ ಜತೆ ಇತರ ಕೈಗಾರಿಕೆಗಳೂ ಹುಟ್ಟಿಕೊಂಡವು. 1936ರಲ್ಲಿ ದೀಪಸ್ತಂಭ ಬೆಂಕಿಗೆ ಆಹುತಿಯಾಯಿತು. ಈ ಬಳಿಕ ಇತರ ಚಟುವಟಿಕೆಗಳು ನಿಧಾನವಾಗಿ ಕುಂಟಿತವಾದವು.
Related Articles
Advertisement
ಆಗಸ್ಟ್ ತಿಂಗಳಲ್ಲಿ ಬೋಟ್ ಶೋ ನಡೆಯುತ್ತದೆ. ತಮ್ಮತಮ್ಮ ಐಷಾರಾಮಿ ವಿಹಾರಿ ನೌಕೆಗಳನ್ನು ಇಲ್ಲಿ ಜನ ಪ್ರದರ್ಶಿಸುತ್ತಾರೆ. ಅತ್ಯಂತ ಭಿನ್ನವಾದ ಈ ಶೋನಲ್ಲಿ ಅತಿ ಹಳೆಯ ವಿಹಾರಿ ನೌಕೆಗಳೊಡನೆ ನವನವೀನ ನೌಕೆಗಳನ್ನು ವೀಕ್ಷಿಸಲು ದೂರದೂರುಗಳಿಂದ ಜನರು ಬರುತ್ತಾರೆ. ನೌಕೆಗಳ ಬಿಡಿಭಾಗ, ನಿರ್ವಹಣೆ, ಖರೀದಿ-ಮಾರಾಟ ಹೀಗೆ ಎಲ್ಲ ಸ್ತರದ ಸಹಾಯ- ವ್ಯಾಪಾರವೂ ಪ್ರದರ್ಶನದ ಜತೆಗೆ ನಡೆಯುತ್ತಿರುತ್ತದೆ.
ಪೋರ್ಟ್ ಕ್ರೆಡಿಟ್‌ನ ಮುಖ್ಯ ಆಕರ್ಷಣೆ ಎಂದರೆ ಇಲ್ಲಿನ ಮರೀನಾ ಅಥವಾ ಬಂದರು. ಇಲ್ಲಿನ ದಕ್ಕೆಯಲ್ಲಿ ಬೇಸಗೆಯ 5- 6 ತಿಂಗಳು ಜನರು ತಮ್ಮ ವಿಹಾರಿ ನೌಕೆಗಳನ್ನು ನಿಲ್ಲಿಸುತ್ತಾರೆ. ಮಧ್ಯಾಹ್ನದ ಬಿಸಿ ಏರಿದಾಗ ತಮ್ಮ ನೌಕೆಗಳಲ್ಲಿ ಒಂಟಾರಿಯೋ ಸರೋವರದಲ್ಲಿ ವಿಹರಿಸುತ್ತಾರೆ. ನೆಚ್ಚಿನ ಸಾಕು ಪ್ರಾಣಿ, ಕುಟುಂಬಿಕರು, ಗೆಳೆಯರೊಂದಿಗೆ ತಿಂಡಿತಿನಿಸು ಮೆಲ್ಲುತ್ತ, ಪಾನೀಯ ಹೀರುತ್ತ, ಬೋರ್ಡ್ ಗೇಮ್ಸ್ ಆಡುತ್ತ ಬಿಸಿಲಿನ ಜಳಕ್ಕೆ ಮೈಯೊಡ್ಡಿ ನೌಕೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸ್ವಂತ ನೌಕೆಗಳಿಲ್ಲದ ಜನರು ನೌಕೆಯನ್ನು ಬಾಡಿಗೆಗೆ ಪಡೆಯುವ ಅವಕಾಶವೂ ಇದೆ.
ಜೂನ್‌ನಿಂದ ಸೆಪ್ಟಂಬರ್ ವರೆಗೆ ಪ್ರತಿ ನಿತ್ಯವೂ ವಿವಿಧ ಜಲಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೀರಿನ ಬೈಕ್, ಪ್ಯಾರಾಸೇಲಿಂಗ್, ಪ್ಯಾರಾಗ್ಲೆ„ಡಿಂಗ್, ಕಯಾಕಿಂಗ್ ಹೀಗೆ ಎಲ್ಲ ರೀತಿಯ ಸೌಲಭ್ಯಗಳೂ ಇಲ್ಲಿವೆ. ಕ್ರೆಡಿಟ್ ನದಿಯಲ್ಲಿ ಮೀನು ಹಿಡಿಯುವ ಜನರೂ ಕಾಣಸಿಗುತ್ತಾರೆ. ಹಂಸ ಮತ್ತು ಕೆನಡಾದ ಪ್ರಿಯ ಬಾತುಕೋಳಿ – ಕೆನೆಡಿಯನ್ ಗೂಸ್ ನೀರಿನ ಮೇಲೆ ತೇಲುತ್ತ ಮಕ್ಕಳನ್ನು ಖುಷಿಪಡಿಸುತ್ತವೆ. ಅಲ್ಲಲ್ಲಿರುವ ಬೆಂಚಿನ ಮೇಲೆ ಕುಳಿತು ಪುಸ್ತಕ ಓದುವ ವೃದ್ಧರ ಮುಗುಳ್ನಗು ಕಂಡರೆ ಪೋರ್ಟ್ ಕ್ರೆಡಿಟ್ ಎಲ್ಲರಿಗೂ ಪ್ರಿಯ ಎನ್ನುವುದರಲ್ಲಿ ಸಂಶಯವಿಲ್ಲ..
ಪೋರ್ಟ್ ಕ್ರೆಡಿಟ್ ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಜಗತ್ತಿನ ಹೆಚ್ಚಿನೆಲ್ಲ ದೇಶಗಳ ರೆಸ್ಟೋರೆಂಟ್‌ಗಳು ಇಲ್ಲಿವೆ. ಇಲ್ಲಿನ ಕಾಫಿ ಮತ್ತು ಐಸ್‌ಕ್ರೀಮ್‌ಗಳಿಗೆ ಸರಿಸಾಟಿಯಾಗಿ ಬೇರೆ ಎಲ್ಲಿಯೂ ಇರಲಾರದು. ಸ್ಥಳೀಯ ವೈನ್ ಹೀರಲೆಂದೇ ದೂರದಿಂದ ಬರುವ ಜನರಿದ್ದಾರೆ.
ಟೊರಂಟೊ ನಗರದಿಂದ ಕೇವಲ 20 ಕಿ.ಮೀ. ದೂರದಲ್ಲಿದೆ. ಸ್ವಂತ ವಿಹಾರಿ ನೌಕೆಗಳಿದ್ದರೆ ಜಲಮಾರ್ಗವಾಗಿ ಅಥವಾ ಸ್ವಂತ ವಾಹನವಿದ್ದರೆ ರಸ್ತೆ ಸಾರಿಗೆ ಮೂಲಕ ಇಲ್ಲಿಗೆ ತಲುಪಬಹುದು. ಟೊರಂಟೋದಿಂದ ನಯಾಗಾರಾದೆಡೆ ತೆರಳುವ ಎಲ್ಲ ರೈಲುಗಳು ಪೋರ್ಟ್ ಕ್ರೆಡಿಟ್‌ನಲ್ಲಿ ನಿಲ್ಲುತ್ತವೆ.
-ಸಹನಾ ಹರೇಕೃಷ್ಣ, ಟೊರಂಟೊ