Advertisement

ವಿಕ್ರಂ ಗ್ರಾಹಕರ ಹಣ ಸದ್ಯಕ್ಕೆ ಕೈಸೇರದು

11:58 AM Sep 02, 2018 | Team Udayavani |

ಬೆಂಗಳೂರು: ಅಲ್ಫಾವಧಿಯಲ್ಲಿ ಹಣ ದ್ವಿಗುಣ, ಅಧಿಕ ಬಡ್ಡಿ ಆಮಿಷ ತೋರಿಸಿ ಕೋಟ್ಯಂತರ ರೂ. ವಂಚಿಸಿರುವ ವಿಕ್ರಂ ಇನ್ವೆಸ್ಟ್‌ಮೆಂಟ್‌ ಪ್ರಕರಣದಲ್ಲಿ ನೂರಾರು ಮಂದಿ ಗ್ರಾಹಕರು ಹಣ ವಾಪಸ್‌ ಪಡೆಯಲು ವರ್ಷಗಳೇ ಬೇಕಾಗಬಹುದು!

Advertisement

ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಹೂಡಿಕೆದಾರರ ಮೊತ್ತ ಎಷ್ಟು, ಗ್ರಾಹಕರಿಗೆ ಎಷ್ಟು ಹಣ ವಾಪಸ್‌ ಕೊಡಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ಸಂಬಂಧ ಕಳೆದ 8-10 ವರ್ಷಗಳ ವಹಿವಾಟಿನ ಮಾಹಿತಿ ನೀಡುವಂತೆ ಕಂಪನಿಯ ಖಾತೆ ಹೊಂದಿರುವ ಬ್ಯಾಂಕ್‌ಗಳನ್ನು ಕೋರಲಾಗಿದೆ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಲು ಸಾಕಷ್ಟು ಸಮಯ ಬೇಕು. ಹೀಗಾಗಿ ಸದ್ಯಕ್ಕೆ ಗ್ರಾಹಕರಿಗೆ ಹಣ ವಾಪಸ್‌ ಸಿಗುವುದು ಕಷ್ಟ.

ಮತ್ತೂಂದೆಡೆ ವಂಚಕ ಕಂಪನಿಯು ಒಬ್ಬರಿಂದ ಹೂಡಿಕೆ ಮಾಡಿಸಿಕೊಂಡ ಹಣವನ್ನು ಮತ್ತೂಬ್ಬರಿಗೆ ಬಡ್ಡಿ ರೂಪದಲ್ಲಿ ಹಿಂದಿರುಗಿಸಿದೆ. ಹೀಗಾಗಿ ಕಂಪನಿ ಹೆಚ್ಚು ಆಸ್ತಿ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರ ಸಂಪೂರ್ಣ ಹಣ ವಾಪಸ್‌ ಸಿಗುವ ಸಾಧ್ಯತೆ ಕಡಿಮೆ. ಜತೆಗೆ ಆರೋಪಿಗಳ ಪೂರ್ವಜರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ.

ಏನಿದ್ದರೂ ವಂಚನೆ ಮಾಡಿರುವ ಕಂಪನಿ ಹೆಸರಿನಲ್ಲಿ ನೊಂದಣಿಯಾಗಿರುವ ಆಸ್ತಿಯನ್ನು ಮಾತ್ರ ಜಪ್ತಿ ಮಾಡಿಕೊಂಡು ಹೂಡಿಕೆದಾರರಿಗೆ ಹಣ ಹಿಂದಿರುಗಿಸಬಹುದು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸಂಪೂರ್ಣ ಹಣ ಮತ್ತೆ ಸಿಗುವುದು ಅನುಮಾನ.

ಕಂಪನಿ ಸಂಸ್ಥಾಪಕ ರಾಘವೇಂದ್ರ ಶ್ರೀನಾಥ್‌ ಸೂಚನೆಯಂತೆ ಪತ್ರಕರ್ತ ಸೂತ್ರಂ ಸುರೇಶ್‌, ಎಲ್‌ಐಸಿ ಏಜೆಂಟ್‌ಗಳಾದ ನರಸಿಂಹಮೂರ್ತಿ, ಪ್ರಹ್ಲಾದ್‌ ಹಾಗೂ ಇತರರು ತಮ್ಮ ವಾಕ್ಚಾರ್ತುಯದಿಂದ ನೂರಾರು ಮಂದಿಯಿಂದ ಕಂಪನಿಗೆ ಒಟ್ಟಾರೆ 430 ಕೋಟಿ ರೂ. ಹೂಡಿಕೆ ಮಾಡಿಸಿದ್ದರು.

Advertisement

ಈ ಪೈಕಿ 300 ಕೋಟಿ ರೂ. ಅನ್ನು ಕೆಲ ಹೂಡಿಕೆದಾರರಿಗೆ ಆಗಾಗ್ಗೆ ಹಿಂದಿರುಗಿಸಲಾಗಿದೆ. ಇದರಲ್ಲಿ ಕೆಲವರು ಬಡ್ಡಿ ಹಾಗೂ ಅಸಲು ಪಡೆದವರು ಇದ್ದಾರೆ. 130 ಕೋಟಿಗೂ ಅಧಿಕ ಮೊತ್ತ ವಂಚನೆಯಾಗಿರುವುದು ಗೊತ್ತಾಗಿದೆ. ಆದರೆ, ಇದುವರೆಗೂ ಎಷ್ಟು ಮಂದಿ ವಂಚನೆಗೊಳಗಾಗಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.

ಕಂಪನಿ ಮುಖ್ಯಸ್ಥ ರಾಘವೇಂದ್ರ ಶ್ರೀನಾಥ್‌, ಹೂಡಿಕೆ ಹಣದಿಂದ ವಿಕ್ರಂ ಗ್ಲೋಬರ್‌ ಕಮಾಡಿಟಿಸ್‌ ಪ್ರೈ ಲಿ, ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಮಾತ್ರವಲ್ಲದೇ, ವಿಕ್ರಂ ಕಮಾಡಿಟಿಸ್‌, ವಿಕ್ರಂ ಲಾಜಿಸ್ಟಿಕ್‌ ಎಂಬ ಇತರೆ ಎರಡು ಕಂಪನಿಗಳನ್ನು ಚೆನ್ನೈನಲ್ಲಿ ತೆರದಿದ್ದು, ಬೆಂಗಳೂರು ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ತನ್ನ ಶಾಖೆಗಳನ್ನು ನಡೆಸುತ್ತಿದ್ದ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಆಸ್ತಿ-ಪಾಸ್ತಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.

600 ಮಂದಿ ದೂರು: ಕಳೆದ 7 ತಿಂಗಳಿಂದ ಇದುವರೆಗೂ ಸುಮಾರು 600 ಮಂದಿ ದೂರು ನೀಡಿದ್ದಾರೆ. ಇನ್ನೂ ದೂರುಗಳು ಬರುತ್ತಿವೆ. ವಂಚನೆ ಕುರಿತು ನಗರದ ವಿವಿಧ ಠಾಣೆಗಳಲ್ಲಿ 30 ಎಫ್ಐಆರ್‌ಗಳು ದಾಖಲಾಗಿವೆ. ಪ್ರಕರಣದಲ್ಲಿ ಬಂಧನವಾಗಿದ್ದ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಸಂಸ್ಥಾಪಕ ರಾಘವೇಂದ್ರ ಶ್ರೀನಾಥ್‌, ಪತ್ರಕರ್ತ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಪ್ರಹ್ಲಾದ್‌, ನಾಗರಾಜ್‌, ಸುರೇಶ್‌ ಸೇರಿ ಎಲ್ಲ ಆರೋಪಿಗಳು ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ.

ಪ್ರತಿಷ್ಠಿತ ವ್ಯಕ್ತಿಗಳೇ ಹೆಚ್ಚು: ವಿಕ್ರಂ ಇನ್ವೆಸ್ಟ್‌ಮೆಂಟ್‌ ಕಂಪನಿಯ ವಹಿವಾಟು ಕಂಡು ಅಚ್ಚರಿಗೊಂಡು ಸಾಮಾನ್ಯ ವ್ಯಕ್ತಿಗಳು ಮಾತ್ರವಲ್ಲದೆ, ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆಯಂತಹ ಗಣ್ಯ ವ್ಯಕ್ತಿಗಳು, ಸರ್ಕಾರಿ, ಖಾಸಗಿ ವೈದ್ಯರು, ವಕೀಲರು, ಸರ್ಕಾರಿ ಅಭಿಯೋಜಕರು ಹಾಗೂ ಪೊಲೀಸರು ಕೂಡ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಇದುವರೆಗೂ ಹಾಲಿ ಅಥವಾ ನಿವೃತ್ತ ಪೊಲೀಸರು ಯಾರು ದೂರು ಕೊಟ್ಟಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವಿಕ್ರಂ ಇನ್ವೆಸ್ಟ್‌ಮೆಂಟ್‌ ಕಂಪನಿ ಹೂಡಿಕೆ ಹಗರಣ ಮಾತ್ರವಲ್ಲದೆ, ಅಲ್ಫಾವಾಧಿಯಲ್ಲಿ ಹಣ ದ್ವಿಗುಣ, ಹೆಚ್ಚು ಬಡ್ಡಿ ಆಮಿಷ, ನಿವೇಶನ, ಫ್ಲ್ಯಾಟ್‌ ಮಾರಾಟ ಹೆಸರಿನಲ್ಲಿ ನೂರಾರು ಕೋಟಿ ರೂ. ವಂಚನೆ ಪ್ರಕರಣಗಳು ಕಳೆದ ಒಂದು ದಶಕದಲ್ಲಿ ಹತ್ತಾರು ಬೆಳಕಿಗೆ ಬಂದಿವೆ. ಆದರೆ, ವಂಚನೆಗೊಳಗಾದವರಿಗೆ ಮಾತ್ರ ಹಣ ಕೈಸೇರಿಲ್ಲ. ಇದುವರೆಗೂ ಮೋಸ ಮಾಡಿ ಕಂಪನಿಗಳ ಪಟ್ಟಿಯಲ್ಲಿ ಡ್ರಿಮ್ಡ್ ಜೆಕೆ. ಅಗ್ರೀಗೋಲ್ಡ್‌, ವಿನಿವಿಂಕ್‌, ಇನ್‌ವೆಸ್ಟೆಕ್‌, ಖಾಸನೀಸ್‌ ಬ್ರದರ್ಸ್‌ ಪ್ರಮುಖವಾದವು.

ಈ ಹಗರಣಗಳ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿ, ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದರೆ, ಅಧಿಕ ಹಣದಾಸೆಗೆ ಬಿದ್ದು ಹೂಡಿಕೆ ಮಾಡಿದ ಗ್ರಾಹಕರಿಗೆ ಅಸಲು ಕೂಡ ಸಿಕ್ಕಿಲ್ಲ. ಮತ್ತೂಂದೆಡೆ ಕೆಲ ಪ್ರಕರಣಗಳಲ್ಲಿ ವಂಚನೆ ಮೊತ್ತೂಕ್ಕೂ ಜಪ್ತಿ ಮಾಡಿಕೊಂಡ ಆಸ್ತಿ ಮೌಲ್ಯಕ್ಕೂ ತುಲನೆ ಅಗದೆ ಹಣ ವಾಪಸ್‌ ಆಗಿಲ್ಲ. ಹೀಗಾಗಿ ಹೂಡಿಕೆದಾರರ ಸಂಪೂರ್ಣ ಹಣ ಯಾವುದೇ ಹಗರಣದಲ್ಲೂ ಸಿಗುವುದಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವಂಚಿಸಿದ ಕಂಪನಿಗಳು (ಅಂದಾಜು ಮೊತ್ತ, ಕೋಟಿಗಳಲ್ಲಿ)
-ವಿಕ್ರಂ ಇನ್‌ವೆಸ್ಟ್‌ಮೆಂಟ್‌  430
-ಡ್ರಿಮ್ಡ್ ಜೆಕೆ, ಇತರೆ        1,000
-ಅಗ್ರೀಗೋಲ್ಡ್‌              6,500
-ವಿನಿವಿಂಕ್‌                  203
-ಇನ್‌ವೆಸ್ಟೆಕ್‌                200
-ಖಾಸನೀಸ್‌                400

ಪೊಲೀಸರ ಮನವಿ: ಹೂಡಿಕೆ ಮಾಡುವ ಮೊದಲು ಗ್ರಾಹಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ದ್ವಿಗುಣ ಹಣ ಕೊಡುವುದಾಗಿ ಹೇಳುವ ಕಂಪನಿ ಹಿನ್ನೆಲೆ, ಪ್ರತಿನಿಧಿಗಳ ಉದ್ದೇಶ ತಿಳಿಯಬೇಕು. ಒಂದು ವೇಳೆ ಅನುಮಾನ ಬಂದರೆ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next