Advertisement

ಮಂಡ್ಯ ಗೆಲ್ಲಲು ವಿಜಯೇಂದ್ರ ಮಾಸ್ಟರ್‌ ಪ್ಲ್ಯಾನ್‌?

11:04 PM Feb 18, 2023 | Team Udayavani |

ಮಂಡ್ಯ: ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡಿ ಕಮಲ ಅರಳಿಸಿದ ಬಿಜೆಪಿ ಯುವ ನಾಯಕ ಬಿ.ವೈ.ವಿಜಯೇಂದ್ರ ಇಡೀ ಮಂಡ್ಯ ಜಿಲ್ಲೆ ಗೆಲ್ಲಲು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

Advertisement

ಹಳೇ ಮೈಸೂರು ಭಾಗದಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಲು ಈಗಾಗಲೇ ಕೇಸರಿ ಪಾಳೆಯ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿ.ವೈ.ವಿಜಯೇಂದ್ರ ಅವರ ಹೆಗಲಿಗೆ ಹಾಕಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಫುಲ್‌ ಆ್ಯಕ್ಟೀವ್‌ ಆಗಿದ್ದಾರೆ.

ಆಕಾಂಕ್ಷಿಗಳೊಂದಿಗೆ ಮಾತುಕತೆ:
ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ಸಾ ಧಿಸುವ ಹಿನ್ನೆಲೆಯಲ್ಲಿ ರಣತಂತ್ರ ಹೆಣೆಯುತ್ತಿರುವ ವಿಜಯೇಂದ್ರ ಎಲ್ಲ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಆಕಾಂಕ್ಷಿತರೊಂದಿಗೆ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಸ್ಥಳದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತರಾದ ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಅಶೋಕ್‌ಜಯರಾಂ, ಶ್ರೀರಂಗಪಟ್ಟಣ ಕ್ಷೇತ್ರದ ಆಕಾಂಕ್ಷಿ ಇಂಡುವಾಳು ಎಸ್‌.ಸಚ್ಚಿದಾನಂದ, ಮದ್ದೂರಿನ ಎಸ್‌.ಪಿ.ಸ್ವಾಮಿ, ಮೇಲುಕೋಟೆಯ ಡಾ.ಇಂದ್ರೇಶ್‌, ಮಳವಳ್ಳಿಯ ಬಿ.ಮುನಿರಾಜು, ನಾಗಮಂಗಲದ ಫೈಟರ್‌ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್‌ ಆಗಿವೆ.

ಕ್ಷೇತ್ರದಲ್ಲಿ ಆ್ಯಕ್ಟೀವ್‌ ಆಗಲು ಸೂಚನೆ:
ಜಿಲ್ಲೆಯ ಏಳೂ ಕ್ಷೇತ್ರಗಳ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆ್ಯಕ್ಟೀವ್‌ ಆಗುವ ಮೂಲಕ ಮತದಾರರ ಸೆಳೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಮತದಾರರ ವಿಶ್ವಾಸ ಗಳಿಸಬೇಕು. ಅಲ್ಲದೆ, ಎದುರಾಳಿಗಳಾದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳನ್ನು ಸೋಲಿಸಲು ಯಾವ ರೀತಿ ರಣತಂತ್ರ ಹೆಣೆಯಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಫೆ.22ರಂದು ಯುವ ಮೋರ್ಚಾ ಸಭೆ:
ಫೆ.22ರಂದು ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಮೊದಲ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೆ ಯುವಕರ ಸೆಳೆಯುವ ಬಗ್ಗೆಯೂ ಚರ್ಚೆ ನಡೆದಿದೆ. ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿಯೂ ಎಲ್ಲ ಆಕಾಂಕ್ಷಿತರು, ಮುಖಂಡರು ಶ್ರಮಿಸಬೇಕು. ಅಲ್ಲದೆ, ಹೆಚ್ಚು ಹೆಚ್ಚು ಯುವಕರನ್ನು ಪಕ್ಷ ಸೇರ್ಪಡೆಗೆ ಮುಂದಾಗಬೇಕೆಂದು ಸೂಚಿಸಿದ್ದಾರೆನ್ನಲಾಗಿದೆ.

Advertisement

ಗೆಲುವಿನ ಮಾಸ್ಟರ್‌ ಮೈಂಡ್‌ ವಿಜಯೇಂದ್ರ
ಕೆ.ಆರ್‌.ಪೇಟೆ ಉಪಚುನಾವಣೆಯ ಗೆಲುವಿಗೆ ಬಿ.ವೈ.ವಿಜಯೇಂದ್ರ ಪ್ರಮುಖ ಕಾರಣರಾಗಿದ್ದರು. ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದ ವಿಜಯೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪ್ರಮುಖ ಮುಖಂಡರನ್ನು ಆಪರೇಷನ್‌ ಮಾಡುವ ಮೂಲಕ ಬಿಜೆಪಿಗೆ ಬಲ ತಂದಿದ್ದರು. ಅಲ್ಲದೆ, ಕ್ಷೇತ್ರದ ಹಳ್ಳಿ, ಗ್ರಾಮಗಳ ಸುತ್ತಿದ್ದ ವಿಜಯೇಂದ್ರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮತಬುಟ್ಟಿಗೆ ಕೈಹಾಕುವ ಮೂಲಕ ಸಚಿವ ಕೆ.ಸಿ.ನಾರಾಯಣಗೌಡ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಸ್ಟ್ರಾಟರ್ಜಿಯನ್ನು ಜಿಲ್ಲೆಯಾದ್ಯಂತ ಬಳಸಲು ಮುಂದಾಗಿದ್ದಾರೆನ್ನಲಾಗಿದೆ.

ವಿಜಯೇಂದ್ರ ಅವರು ಮಂಡ್ಯ ಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಸ್ಥಾನಗಳನ್ನು ಗೆಲ್ಲಲು ಮುಂದಾಗಿದ್ದಾರೆ. ಈಗಾಗಲೇ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಅವರು ಹೇಗೆ ಚುನಾವಣೆ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದೆ ಅವರ ನೇತೃತ್ವದಲ್ಲಿಯೇ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ.
-ಕೆ.ಸಿ.ನಾರಾಯಣಗೌಡ, ಸಚಿವ

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next