ಬೆಂಗಳೂರು:”ರಾಜಕೀಯ ಉಳಿವಿಗಾಗಿ ಒಂದು ವರ್ಗದ ಜನರ ತುಷ್ಟೀಕರಣ, ಅದಕ್ಕಾಗಿ ಸಂಘದ ಅವಹೇಳನ ಇವರ ಕೀಳು ಆಲೋಚನೆಗಳ ಪ್ರತಿಬಿಂಬ. ರಾಷ್ಟ್ರಮಟ್ಟದಲ್ಲಿ ಮೂಲೋತ್ಪಾಟನೆಯಾಗಿರುವ ಒಂದು ರಾಜಕೀಯ ಪಕ್ಷ, ರಾಜ್ಯದಲ್ಲೂ ನೆಲಕಚ್ಚುವ ಕಾಲ ಬಲು ದೂರದಲ್ಲಿಲ್ಲ. ನಾಡಿನ ಮಹಾಜನತೆ ಅವಕಾಶಕ್ಕಾಗಿ ಕಾಯುತ್ತಿದ್ದಾರಷ್ಟೇ…!” ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಟ್ವೀಟ್ ಗಳನ್ನ ಮಾಡಿರುವ ಅವರು ”ರಾಜಕೀಯ ತೆವಲಿಗಾಗಿ ಕೆಲವು ರಾಜಕಾರಣಿಗಳು ಅನಗತ್ಯವಾಗಿ ಸಂಘದ ಅವಹೇಳನದಲ್ಲಿ ತೊಡಗಿರುವ ಬೆಳವಣಿಗೆ ಅವರ ನಾಲಿಗೆ, ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಆಧಾರವಿಲ್ಲದ ಆರೋಪಗಳು, ಎಲ್ಲೆ ಮೀರಿದ ಮಾತು, ನಡವಳಿಕೆಗಳು, ರಾಜ್ಯದ ಘನತೆ ಹಾಗೂ ಗೌರವಕ್ಕೆ ಚ್ಯುತಿ ತರುತ್ತಿದೆ” ಎಂದು ಬರೆದಿದ್ದಾರೆ.
”ರಾಷ್ಟ್ರೀಯ ಸ್ವಯಂಸೇವಕ ಸಂಘ ಮಹಾನ್ ರಾಷ್ಟ್ರಭಕ್ತ ಸಂಘಟನೆ, ಸಂಸ್ಕೃತಿಯ ರಕ್ಷಣೆ ಹಾಗೂ ಉನ್ನತಿಗಾಗಿ, ಭಾರತ ಕಟ್ಟುವ ಬದ್ಧತೆಗಾಗಿ, ಕೋಟಿ ಕೋಟಿ ಸಂಸ್ಕಾರವಂತ ಸತ್ಪ್ರಜೆಗಳನ್ನು ರೂಪಿಸಿ, ಮಾತೃಭೂಮಿಯ ಸೇವೆಗೆ ಸಮರ್ಪಿಸಿದ ಹೆಗ್ಗಳಿಕೆಯ ಐತಿಹಾಸಿಕ ಸಂಘಟನೆ” ಎಂದು ಟ್ವೀಟ್ ಮಾಡಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಮತ್ತೆ ಸಿದ್ದರಾಮಯ್ಯ ಟ್ವೀಟ್ ಮಳೆ
ಸಿದ್ದರಾಮಯ್ಯ ಸೋಮವಾರವೂ ಆರ್ ಎಸ್ ಎಸ್ ವಿರುದ್ಧ ಟ್ವೀಟ್ ಸರಣಿ ಮುಂದುವರಿಸಿದ್ದು, ಬಿಜೆಪಿಯ ಒಬ್ಬ ನಾಯಕರು ಆರ್.ಎಸ್.ಎಸ್ ಶಾಖೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ, ಇನ್ನೊಬ್ಬರು ಆರ್.ಎಸ್.ಎಸ್ ಪುಸ್ತಕ ಓದಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಗೆ ಹೋಗಿ, ಓದಿ ಏನನ್ನು ಕಲಿಯುವುದು? 40% ಕಮಿಷನ್ ಹೊಡೆಯುವುದಾ? ದುಡ್ಡು ಪಡೆದು ಪಕ್ಷಾಂತರ ಮಾಡುವುದಾ? ಎಂದು ಪ್ರಶ್ನಿಸಿದ್ದಾರೆ.
ಆರ್.ಎಸ್.ಎಸ್ ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಜೀವಂತ ಉದಾಹರಣೆ. ಸಂಸ್ಕೃತಿ, ಸಂಸ್ಕಾರ, ಸಚ್ಛಾರಿತ್ರ್ಯದಂತಹ ಮೌಲ್ಯಗಳಿಗೂ, ನಿತ್ಯ ಶಬ್ದಭೇದಿ ಮಾಡುತ್ತಿರುವ ಕಟೀಲ್ ಅವರಿಗೂ ಏನಾದರೂ ಸಂಬಂಧವಿದೆಯೇ? ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.