ವಿಜಯಪುರ: ನಗರದಲ್ಲಿ ಟಿ20 ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಎರಡು ಕಡೆ ದಾಳಿ ನಡೆಸಿ, ಐವರನ್ನು ಬಂಧಿಸಿ, ಲಕ್ಷಕ್ಕೂ ಹೆಚ್ಚು ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಸಿದ್ರಾಮಪ್ಪ, ಗುರುವಾರ ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮಧ್ಯೆ ನಡೆದ ಪಂದ್ಯದ ವೇಳೆ ವಿಜಯಪುರದ ದಹೀವ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಇತ್ತು. ಇದನ್ನು ಆಧರಿಸಿ ಸೊಹೇಲ್ ಸಿರಾಜ್ ಮಣಿಯಾರ್ ಇವರ ಬಾಡಿಗೆ ಮನೆ ಮೇಲೆ ಎಎಸ್ಪಿ ಅಪರಾಧ ವಿಭಾಗದ ಸಿಪಿಐ ರವೀಂದ್ರ ನಾಯೊRàಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ರಹೀಂ ನಗರ ನಿವಾಸಿ ಮಲಿಕ್ ಚಾಂದ್ ಮರಸಲ್, ತೊರವಿ ಗ್ರಾಮದ ಮಲ್ಲು ವಿಠಲ ಮಮದಾಪುರ ಹಾಗೂ ಜುಮನಾಳ ಗ್ರಾಮದ ಜಾಯನಗೌಡ ಬಸನಗೌಡ ಪಾಟೀಲ ಅವರನ್ನು ಬಂಧಿಸಿದ್ದಾರೆ. ಬಂಧಿತರು ಆನ್‌ಲೈನ್ ಮೂಲಕ ಬೆಟ್ಟಿಂಗ್ ರೇಟ್ ಪಡೆದು ಕಿಂಗ್ಸ್ ಇಲೆವನ್ ಗೆದ್ದರೆ 10 ಸಾವಿರಕ್ಕೆ 15 ಸಾವಿರ, ಕೆಕೆಆರ್ ಗೆದ್ದರೆ 10 ಸಾವಿರಕ್ಕೆ 7000 ರೂ. ಬೆಟ್ಟಿಂಗ್ ಹಣ ಕೊಡುವ ಕರಾರು ಮೇಲೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು.
ಬಂಧಿತರಿಂದ 72 ಸಾವಿರ ರೂ. ನಗದು, 6 ಮೊಬೈಲ್, ಟೀವಿ ಮತ್ತು ಸೆಟ್ ಟಾಪ್ ಬಾಕ್ಸ್ ಸೇರಿ 79,550 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಬುಕ್ಕಿಗಳಾದ ರಹೀನ ನಗರ ನಿವಾಸಿ ಹಸನ್ ಡೋಂಗ್ರಿ ರಜಾಕ್ ಸಾಬ್ ಜಮಖಂಡಿ, ಅಬ್ದುಲ್ ಪೀರಾ ರಜಾಕ್‌ಸಾಬ್ ಜಮಖಂಡಿ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ನಗರದ ಆದರ್ಶ ನಗರ ಬಸ್ ನಿಲ್ದಾಣದ ಬಳಿ ವಿಷ್ಣು ಹಳ್ಳದಮನಿ ಉರ್ಫ್ ಲೂಸ ಮಾದ ಅವರ ಇಸ್ತ್ರೀ ಅಂಗಡಿಯಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದಾಗ ಗೋಲಗುಮ್ಮಟ ವೃತ್ತ ಸಿಪಿಐ ಸುನೀಲ ಕಾಂಬಳೆ ನೇತೃತ್ವದ ತಂಡ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದೆ. ಬಂಧಿಧಿತರನ್ನು ವಿಷ್ಣು ಹಳ್ಳದಮನಿ ಉರ್ಫ್ ಲೂಸ್ ಮಾದ ಹಾಗೂ ಸಂಗಪ್ಪ ಪೀರಪ್ಪ ಹರವಾಳ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಶಾಸ್ತ್ರೀ ನಗರ ನಿವಾಸಿಗಳಾದ ಭರತ ವಿಜಯ ಪವಾರ, ಸಚಿನ ಭರತ ಪವಾರ ಹಾಗೂ ರಂಗನಾಥ ಮುಂದಡಾ ಪರಾರಿಯಾಗಿದ್ದು, ಶೋಧಕಾರ್ಯ ನಡೆದಿದೆ. ಪ್ರಕರಣದಲ್ಲಿ ಬಂಧಿತರಿಂದ 25 ಸಾವಿರ ರೂ. ನಗದು ಸಹಿತ 4 ಮೊಬೈಲ್ ಮತ್ತು 1 ಬೈಕ್ ಸರಿ 45 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ .
ಧಾರವಾಡದಲ್ಲಿ ಮೂವರ ಬಂಧನ: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಧಾರವಾಡದಲ್ಲಿ ಅಳ್ನಾವರದಲ್ಲಿ ಮೂವರನ್ನು ಬಂಧಿಸಿದ್ದಾರೆ. ಸ್ಥಳೀಯರಾದ ಇಸ್ಮಾಯತ್ ಚೂಡೀದಾರ್ (35), ಹಮಾಜ್ ತಹಶೀಲ್ದಾರ (24) ಹಾಗೂ ಸಯ್ಯದ್ ಕಿತ್ತೂರ (36) ಬಂಧಿತರು. ಆರೋಪಿಗಳಿಂದ 71,190 ರೂ. ನಗದು, 1 ಎಲ್‌ಇಡಿ ಟಿವಿ, 1ಸೆಟ್‌ಟಾಪ್ ಬಾಕ್ಸ್, 1 ಡಿಶ್, 8 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿಯಲ್ಲಿ ಓರ್ವ ಸೆರೆ: ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಹುಬ್ಬಳ್ಳಿಯ ಗೋಕುಲ ರಸ್ತೆ ಗ್ರೀನ್ ಗಾರ್ಡನ್‌ನ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ಬಂಧಿತನಾಗಿದ್ದು, 1 ಟಿವಿ, ಸೆಟ್ ಟಾಪ್ ಬಾಕ್ಸ್, 4 ಮೊಬೈಲ್, 17,100 ರೂ. ನಗದು ವಶಪಡಿಸಿಕೊಳ್ಳಲಾಗಿದೆ.