ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಸಮಸ್ಯೆ ಅರಿಯಲು ನನ್ನ ಅಧಿಕಾರದ ಅವಧಿಯಲ್ಲಿ ಹಲವು ವಾಸ್ತವ್ಯ ಮಾಡಿದ್ದೇನೆ. ಸಮಾಜದಲ್ಲಿನ ಮೌಢ್ಯ ನಿವಾರಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮಾ.14 ರಂದು ಮುಸ್ಲೀಂ ಖಬರಸ್ತಾನ್ (ಸ್ಮಶಾನ) ವಾಸ್ತವ್ಯ ಮಾಡುತ್ತಿರುವುದಾಗಿ ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡ ನನಗೆ ಸಿಕ್ಕ ಅಧಿಕಾರದ ಅವಧಿಯೂ ಕಡಿಮೆ. ಆದರೂ ಎಲ್ಲ ಸಮುದಾಯಗಳ ಸಮಸ್ಯೆ ಅರಿತು, ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಇದನ್ನೂ ಓದಿ:ಗೆದ್ದಾಗ ಜೈ ಶ್ರೀರಾಮ್ ಬದಲು ಅಲ್ಲಾಹು ಅಕ್ಬರ್ ಕೂಗಿದ್ದರೆ ಸಂಗಮೇಶ್ ಗೆ ಸಮಾಧಾನ ಆಗ್ತಿತ್ತೇ?
ಈಗಾಗಲೇ ಇಟ್ಟಂಗಿಹಾಳ ಗ್ರಾಮದಲ್ಲಿ ಕುರಿ ದೊಡ್ಡಿ ವಾಸ್ತವ್ಯ, ಅರಕೇರಿ ಹಾಸ್ಟೆಲ್ ವಾಸ್ತವ್ಯ, ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಸ್ತವ್ಯ, ಬೋರಗಿ ದಲಿತರ ಮನೆಯಲ್ಲಿ ವಾಸ್ತವ್ಯ ಹೀಗೆ ಹಲವು ಕಡೆಗಳಲ್ಲಿ ವಾಸ್ತವ್ಯ ಮಾಡಿ ನನ್ನ ಅಧಿಕಾರದ ಅವಧಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ ಎಂದರು.
ಇದೀಗ ನನ್ನ ಅಧಿಕಾರದ ಅವಧಿಯ ಕೊನೆಯ ಗ್ರಾಮ ವಾಸ್ತವ್ಯವನ್ನು ಸ್ಮಶಾನದಲ್ಲಿ ಮಾಡಲು ನಿರ್ಧರಿಸಿದ್ದೇನೆ. ಮಹಿಳೆಯರಲ್ಲಿ ಮೂಢ ನಂಬಿಕೆ ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಜುಮನಾಳ ಗ್ರಾಮದ ಸ್ಮಶಾನ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ವೇದಿಕೆ ವರಿಷ್ಠರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪವಾಡ ಬಯಲು ಕಾರ್ಯಕ್ರಮ ರೂವಾರಿ ಹುಲಿಕಲ್ ನಟರಾಜ ಹಾಗೂ ನಾಡಿನ ಪ್ರಗತಿಪರ ಚಿಂತನೆಯ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ:ವಿಶೇಷ ವಿನ್ಯಾಸದ ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ: 33 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ
ಪ್ರಗತಿಪರ ಚಿಂತನೆ ಹೊಂದಿದ್ದ ಸಿಮೆಂಟ್ ಕಾರ್ಖಾನೆ ಕಾರ್ಮಿಕರಾಗಿದ್ದ ನಮ್ಮ ತಂದೆ ಹನುಮಂತ ರೊಳ್ಳಿ ನಮ್ಮ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ. ನಮ್ಮ ತಂದೆ ತಮ್ಮ ದೇಹಾಂತ್ಯದ ಬಳಿಕ ವೈದ್ಯಕೀಯ ಸಂಶೋಧನನೆಗಾಗಿ ಆಸ್ಪತ್ರೆ ವೈದ್ಯಕೀಯ ಆಸ್ಪತ್ರೆಗೆ ದೇಹ ದಾನ ಮಾಡಿದ್ದಾರೆ. ಅವರ ವೈಚಾರಿಕ ಪ್ರಜ್ಞೆಯೇ ನನ್ನ ಗ್ರಾಮ ವಾಸ್ತವ್ಯಕ್ಕೆ ಪ್ರೇರಣೆ ಎಂದರು.
ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ ಉಪಸ್ಥಿತರಿದ್ದರು.