Advertisement

ಪರಿಸರ ಸಂರಕ್ಷಣೆ ಎಲ್ಲರ ಹೊಣೆ

10:36 AM Jun 06, 2019 | Naveen |

ವಿಜಯಪುರ: ಪರಿಸರ ಸಂರಕ್ಷಣೆ ಸಮಾಜದಲ್ಲಿರುವ ಪ್ರತಿಯೊಬ್ಬರ ಹೊಣೆ. ಆದ್ದರಿಂದ ಕೇವಲ ಸಾಂಕೇತಿಕವಾಗಿ ಪರಿಸರ ದಿನಾಚರಣೆ ಆಚರಿಸದೆ ಸಸಿಗಳನ್ನು ನೆಟ್ಟು ಮರಗಳನ್ನಾಗಿ ರೂಪಿಸುವ ಹಂತದವರೆಗೆ ಪೋಷಿಸಬೇಕು. ಈ ಕೆಲಸ ನಿತ್ಯವೂ ನಡೆಯಬೇಕು. ಆಗಲೇ ಪರಿಸರ ಉಳಿಯಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಕಾರಬಾರಿ ಹೇಳಿದರು.

Advertisement

ಬುಧವಾರ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಪೋಷಣೆ ಮತ್ತು ಸಂರಕ್ಷಣೆ ಕುರಿತು ಏರ್ಪಡಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ಉತ್ತಮ ಪರಿಸರ ನಿರ್ಮಾಣಕ್ಕಾಗಿ, ಸ್ವಚ್ಛ ಪರಿಸರ ಅನುಷ್ಠಾನಕ್ಕಾಗಿ ಕೋಟ್ಯಂತರ ರೂ. ಅನುದಾನ ಬಳಕೆ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಫ‌ಲಿತಾಂಶ ಬರುತ್ತಿಲ್ಲ ಎಂದು ವಿಷಾದಿಸಿದರು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು. ಇದರಿಂದ ಸಮಾಜದಲ್ಲಿ ಪರಿಸರ ಪ್ರಜ್ಞೆ ಜಾಗೃತಿಗೆ ಸಹಕಾರಿ ಆಗಲಿದೆ. ಅಲ್ಲದೇ ಪರಿಸರ ಜಾಗೃತಿ ಹಾಗೂ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು. ಪರಿಸರ ನಾಶದಿಂದ ಮಳೆಯಾಗದೇ ಬರಗಾಲ ಆವರಿಸುತ್ತಿದೆ. ಬೆಟ್ಟ-ಗುಡ್ಡಗಳು ನಮ್ಮ ಸ್ವಾರ್ಥಕ್ಕೆ ಬರಿದಾಗುತ್ತಿದ್ದು, ಭವಿಷ್ಯದ ಪೀಳಿಗೆಗೆ ಹಸಿರು ಸಂಕುಲವೇ ಇಲ್ಲದಂತೆ ಮಾಡುತ್ತಿದ್ದೇವೆ. ಇಂಥ ದುಸ್ಥಿತಿಯಿಂದ ಮಾನವ ಸಂಕುಲಕ್ಕೆ ಮಾತ್ರವಲ್ಲ ಪ್ರಕೃತಿಯಲ್ಲಿರುವ ಯಾವ ಜೀವಿಗೂ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಸುರೇಶ ಗೊಣಸಗಿ ಮಾತನಾಡಿ, ಗಿಡ-ಮರಗಳನ್ನು ಬೆಳೆಸುವುದರಿಂದ ಪ್ರಾಣಿ, ಪಕ್ಷಿ ಹಾಗೂ ಮಾನವ ಸಂಕುಲ ಸಂರಕ್ಷಣೆ ಸಾಧ್ಯ. ಪರಿಸರದ ವಿಷಯದಲ್ಲಿ ನಿರ್ಲಕ್ಷ್ಯ ಹಾಗೂ ದಬ್ಟಾಳಿಕೆ ಮುಂದುವರಿದರೆ ಭವಿಷ್ಯದ ದಿನಗಳಲ್ಲಿ ಅತ್ಯಂತ ಸಂಕಷ್ಟ ಎದುರಿಸುವ ಕಾಲ ದೂರವಿಲ್ಲ. ಮರ ಬೆಳೆಸಿ ಬರ ಅಳಿಸಿ ಎಂದು ನಮ್ಮ ಹಿರಿಯರು ಹೇಳಿರುವುದು ಪರಿಸರದ ಮೇಲೆ ಆವರಿಗಿದ್ದ ವೈಜ್ಞಾನಿಕ ಜ್ಞಾನಕ್ಕೆ ಸಾಕ್ಷಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ| ಎಸ್‌.ಬಿ. ಕಲಗಟಗಿ ಮಾತನಾಡಿ, ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್‌ ಬಳಕೆಯಿಂದ ಮಾನವ ಸಂಕುಲದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

Advertisement

ಸಿಂದಗಿ ವಲಯ ಅರಣ್ಯಾಧಿಕಾರಿ ಬಿ.ಐ. ಬಿರಾದಾರ, ವಿಜಯಪುರ ವಲಯ ಅರಣ್ಯಾಧಿಕಾರಿ ರೂಪಾ, ಕೃಷಿ ಮಹಾವಿದ್ಯಾಲಯದ ಡೀನ್‌ ಡಾ| ಎಸ್‌.ಎಂ. ಮುಂದಿನಮನಿ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನ ನಿರ್ದೇಶಕ ಡಾ| ಐ.ಎಸ್‌. ಕಟಗೇರಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.

ಪ್ರಗತಿ ಪರ ರೈತ ಮಲ್ಲು ಬಿದರಿ, ಡಾ| ಪ್ರೇಮಾ ಪಾಟೀಲ, ಡಾ| ಸಂಗೀತಾ ಜಾಧವ, ಡಾ| ಶ್ರೀಶೈಲ ರಾಠೊಡ, ವಿವೇಕ್‌ ದೇವರನಾವದಗಿ, ಮಲ್ಲಪ್ಪ, ಬಂಡೆಪ್ಪ ತೇಲಿ ಇದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್‌.ಎ. ಬಿರಾದಾರ ಸ್ವಾಗತಿಸಿದರು. ಡಾ| ಬಿ.ಸಿ. ಕೊಲ್ಹಾರ ನಿರೂಪಿಸಿದರು. ಡಾ| ಎಸ್‌.ಎಂ. ವಸ್ತ್ರದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next