Advertisement

ಮಹಿಳಾ ವಿಜ್ಞಾನಿಗಳ ಗುರುತಿಸುವ ಕೆಲಸವಾಗಲಿ: ರೂಪಾ

02:53 PM Jun 24, 2019 | Naveen |

ವಿಜಯಪುರ: ಉಪಗ್ರಹ ಪಥವನ್ನು ನಿರ್ಧರಿಸುವ ಮಂಡಳಿಯಲ್ಲಿಯೂ ಮಹಿಳೆಯರ ಪಾತ್ರ ಮಹತ್ವದಾಯಕವಾಗಿದೆ ಎಂದು ಬೆಂಗಳೂರು ಇಸ್ರೋ ಸಂಸ್ಥೆಯ ಖ್ಯಾತ ವಿಜ್ಞಾನಿ ರೂಪಾ ಎಂ.ವಿ. ತಿಳಿಸಿದರು.

Advertisement

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿವಿಯ 16ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆ ಮತ್ತು ಬಾಹ್ಯಾಕಾಶ ವಿಜ್ಞಾನ ಕುರಿತು ಅವರು ಉಪನ್ಯಾಸ ನೀಡಿದರು.

ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ನಾಸಾ ಮತ್ತು ಇಸ್ರೋಗಳಲ್ಲಿಯೂ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಹಿಳಾ ವಿಜ್ಞಾನಿಗಳು ಮಾತ್ರ ಬೆಳಕಿಗೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾ ವಿಜ್ಞಾನಿಗಳನ್ನು ಗುರುತಿಸುವಂತಹ ಕೆಲಸ ತುರ್ತಾಗಿ ನಡೆಯಬೇಕಿದೆ ಎಂದರು.

ಮಂಗಳಯಾನದಲ್ಲಿಯೂ ಮಹಿಳೆಯರು ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಸಾಧನೆಗಳಿಂದ ಬೆಳಕಿಗೆ ಬರುವುದು ನಿಜವಾದ ಸಾಧನೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಘಟಿಕೋತ್ಸವದ ಭಾಷಣಗಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯಕ್ಕೆ ಇಲ್ಲಿವರೆಗೆ ದೊರೆತ ಅನುದಾನ ಸಾಲದು. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು ಎಂದರು.

Advertisement

ವಿದ್ಯಾರ್ಥಿನಿಯರಿಗೆ ಬೇಕಾಗಿರುವುದು ಅಂಕಗಳಿಸುವ ಶಿಕ್ಷಣವಲ್ಲ, ಮನಸ್ಸು ಗಳಿಸುವ ಶಿಕ್ಷಣ. ಸಂಶೋಧನೆ, ಬೋಧನೆ, ಹೊಸ ಶಿಕ್ಷಣ ನೀತಿಗಳಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ| ಸಬೀಹಾ ಮಾತನಾಡಿ, ಕಾಲೇಜಿನ ಆವರಣವನ್ನು ಆತ್ಮವೆಂದು ಭಾವಿಸಿದರೆ ವಿದ್ಯಾರ್ಥಿನಿಯರು ತಮ್ಮ ಆಕ್ಷೇಪ, ಕರ್ತವ್ಯ ಮತ್ತು ಕನಸುಗಳನ್ನು ತಿಳಿಯಲು ಸಹಕಾರಿಯಾಗುತ್ತದೆ. ಬೌದ್ಧಿಕವಾದ ಆಕ್ಷೇಪ ನಿರೀಕ್ಷೆ ಮೀರಿ ಕಾಲೇಜಿನ ಆತ್ಮವನ್ನು ಜೀವಂತವಿಡಲು ಪ್ರಯತ್ನಿಸಬೇಕು.

ಏನಿಲ್ಲದರ ನಡುವೆಯೇ ಅನೇಕ ಹೊಸತನಗಳು ಹುಟ್ಟಿವೆ ಎಂಬ ನಿದರ್ಶನಗಳು ಮನುಕುಲದ ಪ್ರತಿ ಚರಿತ್ರೆಯಲ್ಲೂ ಕಾಣಬಹುದು. ತನ್ಮಯತೆ, ಪ್ರಯತ್ನ, ಪ್ರಾಮಾಣಿಕತೆ ಬೆಳೆಸುವ ಕಾರ್ಯ ಕಾಲೇಜಿನಲ್ಲಿ ನಡೆಯಬೇಕು. ಅದುವೇ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸಹಾಯಕ. ಏಕೆಂದರೆ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು ಪರಸ್ಪರ ಸಂಬಂಧ ಹೊಂದಿರುತ್ತವೆ ಎಂಬುದನ್ನು ಮರೆಯಬಾರದು ಎಂದರು.

ಇದೇ ಸಂದರ್ಭದಲ್ಲಿ ವಾರ್ಷಿಕ ಸ್ಮರಣ ಸಂಚಿಕೆಯ ವಿಜೇತ ಕಾಲೇಜುಗಳಿಗೆ ಬಹುಮಾನ ವಿತರಿಸಲಾಯಿತು. ಬಾಗಲಕೋಟೆಯ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ ಕದಳಿಶ್ರೀ (ಪ್ರಥಮ), ಕಲಬುರಗಿಯ ಬೀಬೀ ರಜಾ ಮಹಿಳಾ ಪದವಿ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ ಹೋರಿಝಾನ್‌ (ದ್ವೀತಿಯ), ಕಲಬುರಗಿಯ ಗೋದುತಾಯಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ ಮುತ್ತೈದೆ (ತೃತೀಯ) ಬಹುಮಾನ ಪಡೆದವು. ಸರ್ಕಾರಿ ಕಾಲೇಜುಗಳ ವಿಭಾಗದಲ್ಲಿ ಬೈಲಹೊಂಗಲದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ ಸ್ಪೂರ್ತಿ ವಿಶೇಷ ಬಹುಮಾನಕ್ಕೆ ಭಾಜನವಾಯಿತು. ಆರ್ಥಿಕ ಅಧಿಕಾರಿ ಎಸ್‌.ಬಿ. ಮಾಡಗಿ, ಮೌಲ್ಯಮಾಪನ ಕುಲಸಚಿವ ಪಿ.ಜಿ. ತಡಸದ, ಮಹಿಳಾ ವಿವಿ ಕುಲಸಚಿವೆ ಆರ್‌. ಸುನಂದಮ್ಮ, ಡಾ| ವಿಷ್ಣು ಶಿಂಧೆ, ಉದಯಕುಮಾರ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next