Advertisement

Vijayapura; ಗುಡ್ಡಾಪುರ ಸಮಗ್ರ ಅಭಿವೃದ್ಧಿಗಾಗಿ ಫಡ್ನವೀಸ್ ಭೇಟಿ : ವಿಜುಗೌಡ

05:21 PM Jul 30, 2024 | keerthan |

ವಿಜಯಪುರ: ಮಹಾಶಿವ ಶರಣೆ ದಾನಮ್ಮದೇವಿ ನೆಲೆಸಿರುವ ಮಹಾರಾಷ್ಟ್ರದ ಜತ್ ತಾಲೂಕಿನ ಗುಡ್ಡಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜಿಸಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ನೀಡಿದಂತೆ ಮಹಾರಾಷ್ಟ್ರ ಸರ್ಕಾರ ಸಹಕಾರ ನೀಡುವಂತೆ ಮನವಿ ಮಾಡಲಾಗುತ್ತದೆ. ಇದಕ್ಕಾಗಿ ಶೀಘ್ರವೇ ಅಲ್ಲಿನ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಶ್ರೀದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳ ಹಿಂದಷ್ಟೇ ಹಳೆ-ಹೊಸ ತಂಡದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ನಮ್ಮ ಅವಧಿಯಲ್ಲಿ ಕೇವಲ ಭಕ್ತರು ಎಂಬ ಭಾವದಲ್ಲಿ ಶ್ರೀಕ್ಷೇತ್ರವನ್ನು ರಾಜಕೀಯೇತರವಾಗಿ ರೂಪಿಸಲು ಮುಂದಾಗಿದ್ದೇವೆ ಎಂದರು.

ಗುಡ್ಡಾಪುರಕ್ಕೆ ಆಗಮಿಸುವ ಭಕ್ತರಿಗೆ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ. ಶ್ರೀಕ್ಷೇತ್ರ ಮಹಾರಾಷ್ಟ್ರ ರಾಜ್ಯದಲ್ಲಿದ್ದರೂ ಇಲ್ಲಿಗೆ ಬರುವ ಶೇ.92 ರಷ್ಟು ಭಕ್ತರು ಕರ್ನಾಟಕದವರು. ಮಹಾರಾಷ್ಟ್ರದಿಂದ ಶೇ.2-3 ರಷ್ಟಿದ್ದು, ಉಳಿದಂತೆ ತೆಲಂಗಾಣ, ಆಂಧ್ರಪ್ರದೇಶ ರಾಜ್ಯದವರಿದ್ದಾರೆ. ಭಕ್ತರಿಂದ ಈ ಭಾಗದಲ್ಲಿ ಆದಾಯವಿದ್ದರೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಆಸಕ್ತಿ ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ರಾಜ್ಯದಲ್ಲಿದ್ದರೂ ಗುಡ್ಡಾಪುರ ಕ್ಷೇತ್ರದ ಅಭಿವೃದ್ಧಿ, ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಕರ್ನಾಟಕ ಸರ್ಕಾರ ತೋರಿದಂತೆ ಮಹಾರಾಷ್ಟ್ರ ಸರ್ಕಾರ ಕಾಳಜಿ ತೋರುತ್ತಿಲ್ಲ. ಹೀಗಾಗಿ ಲಕ್ಷಾಂತರ ಭಕ್ತರನ್ನು ಹೊಂದಿರುವ ದಾನಮ್ಮದೇವಿ ಕ್ಷೇತ್ರದಲ್ಲಿ ಭಕ್ತರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನರಿತು ಗುಡ್ಡಾಪುರದ ಸಮಗ್ರ ಅಭಿವೃದ್ಧಿಗೆ ನೆರವು ಕೋರಿ ಮಹಾ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.

ಇದಲ್ಲದೇ ದೇವಸ್ಥಾನದಿಂದ ಭಕ್ತರ ನಿರೀಕ್ಷೆಯಂತೆ ಇನ್ನೂ ಏನೇನು ಅಭಿವೃದ್ಧಿ ಮಾಡಬೇಕು ಎಂಬ ಚಿಂತನೆ ನಡೆಸಲಾಗುತ್ತದೆ. ಇದಕ್ಕಾಗಿ ಭಕ್ತರು ಸಲಹೆ-ಸೂಚನೆ ನೀಡಲು ಸಲಹಾ ಪೆಟ್ಟಿಗೆ ಇರಿಸಲಾಗಿದೆ. ಭಕ್ತರ ವಾಹನಗಳ ನಿಲುಗಡೆಗಾಗಿ ಅತಿಕ್ರಮಣ ತೆರವುಗೊಳಿಸಿದ್ದು, ಪಾರ್ಕಿಂಗ್‌ಗಾಗಿಯೇ 4 ಎಕರೆ ಜಮೀನು ಮೀಸಲಿರಿಸಲಾಗಿದೆ ಎಂದು ವಿವರಿಸಿದರು.

Advertisement

ಆ.1 ರಂದು ಗುಡ್ಡಾಪುರದಲ್ಲಿ ಕರ್ನಾಟಕ ಭವನ ಲೋಕಾರ್ಪಣೆ

ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರದ ದಾನಮ್ಮ ಶರಣೆಯ ಶ್ರೀಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಭವನ ಆ.1 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

ಆ.1 ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಂಟಿಯಾಗಿ ಕರ್ನಾಟಕ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ದುಧನಿ ಜಡೆಶಾಂತಲಿಂಗೇಶ್ವರ ಶ್ರೀಗಳು, ಜಿಡಗಾಮಠದ ಡಾ.ಮುರುಘ ರಾಜೇಂದ್ರ ಶ್ರೀಗಳು, ಗೌರಿಗದ್ದೆಯ ವಿನಯ ಗುರೂಜಿ, ಪಂಚಮಸಾಲಿ ಪೀಠದ ಜಗದ್ಗುರು ಡಾ.ಮಹದೇವ ಶ್ರೀಗಳು, ಗುಡ್ಡಾಪುರ ಹಿರೇಮಠದ ಗುರುಪಾದ ಶ್ರೀಗಳು, ಗೌಡಗಾಂವಂ ಡಾ.ಜಯಸಿದ್ಧೇಶ್ವರ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮಹಾರಾಷ್ಟçದ ಜತ್ ಶಾಸಕ ವಿಕ್ರಮಸಿಂಹ ಸಾವಂತ, ಟ್ರಸ್ಟ್ ಅಧ್ಯಕ್ಷನಾದ ನಾನು ಅಧ್ಯಕ್ಷತೆ ವಹಿಸಲಿದ್ದೇವೆ ಎಂದರು.

ಕರ್ನಾಟಕದ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಮಹಾರಾಷ್ಟ್ರದ ಕಾರ್ಮಿಕ ಸಚಿವರಾದ ಸಾಂಗಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಖಾಡೆ ಸೇರಿದಂತೆ ಕರ್ನಾಟಕ-ಮಹಾರಾಷ್ಟ್ರ ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕರು, ಗಣ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುಜರಾಯಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರ ಪರಿಶ್ರಮದಿಂದ 11 ಕೋಟಿ ರೂ. ಅನುದಾನ ಬಿಡುಗಡೆ ಆಗಿತ್ತು. ಸದರಿ ಅನುದಾನದಲ್ಲಿ ನಿತ್ಯವೂ ಹತ್ತಾರು ಸಾವಿರ ಭಕ್ತರು ಆಗಮಿಸುವ ಶ್ರೀಕ್ಷೇತ್ರದಲ್ಲಿ ಸುಸಜ್ಜಿತ ಪ್ರಸಾದಕ್ಕಾಗಿ ಏಕಕಾಲಕ್ಕೆ 4 ಸಾವಿರ ಭಕ್ತರು ಕುಳಿತು ಊಟ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next