ವಿಜಯಪುರ: ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗ್ಗೆ ವಿವಿಧ ಮಾರ್ಗಗಳಿಂದ ಜಿಲ್ಲೆಯ ನಗರ-ಪಟ್ಟಣ ಪ್ರದೇಶಕ್ಕೆ ಆಗಮಿಸಿದ ಜನರು ತಮ್ಮೂರು ಸೇರಲು ಪರದಾಡಿದರು.
ಜಿಲ್ಲೆಯಲ್ಲಿ ಬಹುತೇಕ ಎಲ್ಲೆಡೆ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಬಸ್ ಸಂಚಾರ, ನಗರ ಸಾರಿಗೆ ಸೇರಿದಂತೆ ಎಲ್ಲ ರೀತಿಯ ಸಾರಿಗೆ ಸಂಪೂರ್ಣ ಇಲ್ಲದಂತಾಗಿತ್ತು. ಜನ-ವಾಹನ ಓಡಾಟ ಇಲ್ಲದೇ ರಸ್ತೆಗಳು ನಿರ್ಜನವಾಗಿದ್ದವು. ಜಿಲ್ಲೆಯ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸರ್ಪಗಾವಲು ನಿರ್ಮಿಸಿದ್ದರು. ನಾಗರಿಕ ಪೊಲೀಸ್ ಸೇವೆಯ ಜೊತೆಗೆ ವಿವಿಧ ಮೀಸಲು ಪಡೆಯವರು ಅಲ್ಲಲ್ಲಿ ಬೀಡು ಬಿಟ್ಟಿದ್ದರು. ನಿರ್ಬಂಧ ಮೀರಿ ಅನಗತ್ಯವಾಗಿ ರಸ್ತೆಗೆ ಬಂದವರಿಗೆ ಲಾಠಿ ರುಚಿ ತೋರಿಸಿದ್ದೂ ಕಂಡುಬಂತು.
ಇನ್ನು ಲಾಕ್‌ಡೌನ್ ಮಾಹಿತಿ ಇದ್ದರೂ ಬೆಳಗ್ಗೆ ಊರು ಸೇರುವ ವಿಶ್ವಾಸದಲ್ಲಿ ಬೆಂಗಳೂರು ಸೇರಿದಂತೆ ಇತರೆ ಪ್ರದೇಶಗಳಿಂದ ಬಸ್ ಗಳಲ್ಲಿ ನಗರಕ್ಕೆ ಬಂದಿಳಿದ ಪ್ರಯಾಣಿಕರಿಗೆ ಭಾನುವಾರದ ಲಾಕ್ ಡೌನ್ ಶಾಕ್ ನೀಡಿತ್ತು. ನಗರ ಸೇರಿದಂತೆ ಎಲ್ಲ ಬಸ್ ನಿಲ್ದಾಗಳಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಜಿಲ್ಲೆಗೆ ಬಂದವರು ತಮ್ಮ ಊರು ಸೇರಲು ಪರದಾಟ ನಡೆಸಿದರು. ಕದ್ದುಮುಚ್ಚಿ ಕಳ್ಳ ಮಾರ್ಗಗಳಲ್ಲಿ ಸಂಚಾರ ಆರಂಭಿಸಿದ್ದ ಆಟೋ ಚಾಲಕರು ಇಂಥ ಅಸಹಾಯಕ ಜನರಿಗೆ ತಮ್ಮ ಊರು ಸೇರಿಸಲು 2500-3000 ರೂ. ಬೇಡಿಕೆ ಇಟ್ಟ ಕಾರಣ ಪ್ರಯಾಣಿಕರು ಕಂಗಾಲಾಗಿ ಕುಳಿತಿದ್ದರು.
ನಗರದ ಮಹಾತ್ಮಾ ಗಾಂ ಧೀಜಿ ವೃತ್ತ, ಕಿತ್ತೂರ ಚನ್ನಮ್ಮ ಮಾರುಕಟ್ಟೆ, ನೆಹರು ಮಾರುಕಟ್ಟೆ ಸೇರಿದಂತೆ ಎಲ್ಲ ವಾಣಿಜ್ಯ ಸಂಕೀರ್ಣಗಳು ಶನಿವಾರ ಸಂಜೆ ಹಾಕಿದ ಬಾಗಿಲನ್ನು ತೆರೆಯಲಿಲ್ಲ. ಲಾಲ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸ್ವಯಂ ಪ್ರೇರಿತ ಬಂದ್ ಮಾಡಿದ್ದರೆ, ಎಲ್ಲ ಹೋಟೆಲ್, ಬಟ್ಟೆ ಅಂಗಡಿಗಳು, ಚಿನ್ನದ ವ್ಯಾಪಾರಿಗಳು ಸೇರಿದಂತೆ ಎಲ್ಲ ವಹಿವಾಟು ಸಂಪೂರ್ಣ ಬಂದ್ ಆಗಿದ್ದವು. ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ, ಪೆಟ್ರೋಲ್ ಬಂಕ್, ಕಿರಾಣಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಜನರ ಕೊರತೆ ಎದುರಿಸುವಂತಾಯಿತು.