Advertisement

Vijayapura; ಯಾರನ್ನೂ ತೆಗೆದು ಸಿಎಂ ಆಗುವ ಆಸೆ ನಮ್ಮಲ್ಲಿ ಇಲ್ಲ: ಎಂ.ಬಿ.ಪಾಟೀಲ್

04:37 PM Sep 08, 2024 | keerthan |

ವಿಜಯಪುರ: ಮುಖ್ಯಮಂತ್ರಿ ಸ್ವಯಂಘೋಷಿತ ಆಗುವುದಿಲ್ಲ. ಪಕ್ಷ ಹಾಗೂ ಶಾಸಕರು ನಿರ್ಧಾರ ಮಾಡಬೇಕು. ಯಾರನ್ನೂ ತೆಗೆದು ಮುಖ್ಯಮಂತ್ರಿಯಾಗುವ ಆಸೆ ನಮ್ಮಲ್ಲಿ ಇಲ್ಲ. ಅದಕ್ಕೆ ಕೈ ಹಾಕುವ ಪ್ರಶ್ನೆಯೂ ಬರಲ್ಲ ಎಂದು ಬೃಹತ್ ಹಾಗೂ ಮಾಧ್ಯಮ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

Advertisement

ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರಸ್ತುತ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.

ಮುಂದೆಯೂ ನಾವೆಲ್ಲರೂ ಸಿದ್ದರಾಮಯ್ಯನವರ ಪರವಾಗಿರುತ್ತೇವೆ. ಇದನ್ನು ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಿದ್ದೇವೆ. ಕೆಪಿಪಿಸಿ ಅಧ್ಯಕ್ಷರು, ಮಂತ್ರಿಗಳು, ಶಾಸಕರು ಮತ್ತು ಎಲ್ಲ ಕಾರ್ಯಕರ್ತರು ಸಿದ್ದರಾಮಯ್ಯನವರ ಜೊತೆಗಿದ್ದೇವೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪರವಾಗಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ. ಆಗ ಬಿಜೆಪಿಯವರು ಪಶ್ಚಾತಾಪ ಪಡುವ ಕಾಲ ಬರುತ್ತದೆ ಎಂದರು

ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ಮತ್ತು ಪಕ್ಷದಲ್ಲಿ ಹಿರಿಯ, ಕಿರಿಯ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ತಪ್ಪೇನಿದೆ?. ನಾನು ಸಹ ದೆಹಲಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಇದರಲ್ಲಿ ತಪ್ಪಿದೆಯಾ ಎಂದು ಮರು ಪ್ರಶ್ನಿಸಿದರು.

ಪಕ್ಷದಲ್ಲಿ ಸೀನಿಯರ್ ಅಂದರೆ ನಾನು ಎಂ.ಬಿ.ಪಾಟೀಲ್, ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಅವರು ಬರುತ್ತೇವೆ. ನಾವೆಲ್ಲ ಒಂದು. ನಾನು ಸತೀಶ್ ಜಾರಕಿಹೊಳಿ ಅವರಿಗಿಂತ ಸೀನಿಯರ್. ನಮಗಿಂತ ಸೀನಿಯರ್  ಅಂದ್ರೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ದೇಶಪಾಂಡೆ ಅವರು ಬರುತ್ತಾರೆ. ಆದರೆ, ರಾಜ್ಯದಲ್ಲಿ ಈಗ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.

Advertisement

ಸಿಎಂ ಆಗುವ ಆಸೆ ಇದೆ, ದುರಾಸೆ ಇಲ್ಲ: ಇದೇ ಸಂದರ್ಭದಲ್ಲಿ ತಾವು ಸಿಎಂ ಆಕಾಂಕ್ಷೆಯೇ ಎಂಬ ಪ್ರಶ್ನೆಗೆ ಅವರು, ನಾನು ಮುಂದೆ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ. ನನಗೂ ಆಸೆ ಇದೆ. ಆದರೆ, ಅದು ದುರಾಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಮುಖ್ಯಮಂತ್ರಿಯಾದರೆ ಜನರಿಗೆ ಒಳ್ಳೆಯದನ್ನೇ ಮಾಡುತ್ತೇನೆ. ನೀರಾವರಿ ಮಂತ್ರಿಯಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದೇನೆ. ನಾನು ಮುಖ್ಯಮಂತ್ರಿಯಾದರೆ ವಿಜಯಪುರ ಮತ್ತು ರಾಜ್ಯದ ಜನರಿಗೆ ಸಂತೋಷವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next