Advertisement

ಮತದಾರರ ಪಟ್ಟಿಗೆ ಯುವಬಲ

12:07 PM Jan 01, 2020 | |

ವಿಜಯಪುರ: ರಾಜ್ಯಾದ್ಯಂತ ಜನವರಿ 6ರಿಂದ ಮೂರು ದಿನ ಯುವ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲೆಯ ಪ್ರತಿ ಕಾಲೇಜುಗಳ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎ. ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ಮತದಾರರ ಮಿಂಚಿನ ನೋಂದಣಿ ಅಂಗವಾಗಿ ಜಿಲ್ಲೆಯ ತಹಶೀಲ್ದಾರ್‌ರು ಹಾಗೂ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಇದಕ್ಕಾಗಿ ಜಿಲ್ಲೆಯ ಸರಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಎಲ್ಲ ಕಾಲೇಜುಗಳ ಅರ್ಹ ಮತದಾರರ ನೋಂದಣಿ ಕಾರ್ಯ ತಕ್ಷಣ ಆರಂಭಿಸುವಂತೆ ಸೂಚನೆ ನೀಡಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಆಗಲು 43,924 ಅರ್ಹ ಯುವ ಸಮೂಹವಿದೆ. ಪ್ರತಿ ಕಾಲೇಜು, ಪ್ರಾಂಶುಪಾಲರು, ಆಯಾ ತಾಲೂಕು ತಹಶೀಲ್ದಾರ್‌ರು, ಬಿಇಒಗಳು ಮತದಾರರ ನೋಂದಣಿ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ತಲಾ 6 ಸಾವಿರ ಯುವಜನರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದು, ಇಂಥ ಎಲ್ಲರನ್ನೂ ತಕ್ಷಣ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಚುನಾವಣಾ ಆಯೋಗ ಸುಶಿಕ್ಷಿತ ಯುವ ಜನಾಂಗ ಮತದಾರರ ಪಟ್ಟಿಯಿಂದ ಹಾಗೂ ಮತದಾನದಿಂದ ಹೊರಗೆ ಉಳಿಯ ಬಾರದು ಎಂಬ ಆಶಯ ಹೊಂದಿದೆ. ಅರ್ಹತೆ ಇದ್ದರೂ ಮಾಹಿತಿ ಇಲ್ಲದ ಕಾರಣಕ್ಕೆ ಜಿಲ್ಲಾ ಕೇಂದ್ರದಿಂದ ವಿವಿಧ ಕಾರಣಗಳಿಂದ ಹೊರಗುಳಿದ ಯುವ ಮತದಾರರನ್ನು ತಕ್ಷಣ ಮತದಾರರ ಪಟ್ಟಿಗೆ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ದಿ.1-1-2020ಕ್ಕೆ 18 ವರ್ಷ ಪೂರ್ಣ ಮುಕ್ತಾಯವಾದ ಯುವ ಮತದಾರರ ಮಾಹಿತಿ ಸಂಗ್ರಹಿಸಿ ತಕ್ಷಣ ನಿಗದಿತ ನಮೂನೆ 6ರಲ್ಲಿ ಭರ್ತಿ ಮಾಡಿ ಹೆಸರು ನೋಂದಾಯಿಸುವ ಮೂಲಕ ಅರ್ಹ ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಆಯಾ ಕಾಲೇಜುಗಳ ವ್ಯಾಪ್ತಿಯಲ್ಲಿ ಅರ್ಜಿ ನಮೂನೆ 6ನ್ನು ನೀಡಲು ಆಯಾ ಗ್ರಾಮ ಲೆಕ್ಕಾಧಿಕಾರಿಗಳನ್ನು ನೋಡಲ್‌ ಆಗಿ ನೇಮಿಸಿದ್ದು, ಆಯಾ ಕಾಲೇಜ್‌ಗೆ ಇವರು ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕೃತ ಮತದಾರರ ನೋಂದಣಿ ಇಲ್ಲದ ಮಾಹಿತಿಯೊಂದಿಗೆ ಅರ್ಜಿ ಸ್ವೀಕರಿಸಿ, ಭರ್ತಿ ಮಾಡಿ ಮತದಾರರಾಗಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಆಯಾ ಕಾಲೇಜುಗಳ, ನೋಟಿಸ್‌ ಬೋರ್ಡ್‌ಗಳ ಮೇಲೆಯೂ ನೋಂದಣಿ ಕುರಿತು ಭಿತ್ತಿ ಚಿತ್ರ ಅಂಟಿಸಬೇಕು. ಆಯಾ ತಹಶೀಲ್ದಾರ್‌ರು ಕೂಡ ಪ್ರತಿ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಯುವ ಜನರು ಮತದಾರರ ಪಟ್ಟಿಗೆ ಸೇರಿಸಿದ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

Advertisement

ಎಲ್ಲ ನೋಡಲ್‌ ಅ ಧಿಕಾರಿಗಳು, ತಹಶೀಲ್ದಾರ್‌ ರು, ಕಾಲೇಜು ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಮಿಂಚಿನ ನೋಂದಣಿ ಮಾಡಿಸಬೇಕು. ಆಯಾ ಉಪವಿಭಾಗಾಧಿಕಾರಿಗಳು ಕೂಡ ಮೇಲ್ವಿಚಾರಣೆ ನಡೆಸುವಂತೆ ತಿಳಿಸಿದ ಅವರು, ಜಿಲ್ಲಾ ಧಿಕಾರಿಗಳ ಕಚೇರಿ ಚುನಾವಣಾ ಶಾಖೆಯೊಂದಿಗೆ ಸಂಬಂಧಿಸಿದ ಅಧಿಕಾರಿಗಳು ಸಂಪರ್ಕದಲ್ಲಿದ್ದು ಮಿಂಚಿನ ನೋಂದಣಿ ಕಾರ್ಯ ಯಶಸ್ವಿಗೊಳಿಸಲು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಮಹಾವಿದ್ಯಾಲಯ, ಪದವಿ, ಪಪೂ ಕಾಲೇಜುಗಳ ವ್ಯಾಪ್ತಿಯ ಪ್ರತಿ ವಿದ್ಯಾರ್ಥಿ ಮತದಾರರಾಗಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಬೇರೆ ಜಿಲ್ಲೆ ಅಥವಾ ಬೇರೆ ತಾಲೂಕು ಮತದಾರರು ಕಂಡು ಬಂದಲ್ಲಿ ಅರ್ಜಿ ನಮೂನೆ 6ನ್ನು ನೀಡಿ, ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಬೇಕು. ಕಾಲೇಜು ಪ್ರಾಂಶುಪಾಲರು ತಮ್ಮ ಕಾಲೇಜಿನ ಓರ್ವ ಉಪನ್ಯಾಸಕರನ್ನು ಸಮನ್ವಯ ಅಧಿಕಾರಿಯಾಗಿ ನಿಯೋಜಿಸಬೇಕು ಎಂದು ನಿರ್ದೇಶನ ನೀಡಿದರು.

ಜನವರಿ 6ರಿಂದ ಮಿಂಚಿನ ಮತದಾರರ ನೋಂದಣಿ ಅಂಗವಾಗಿ ಆಯಾ ತಹಶೀಲ್ದಾರ್‌ ರು, ಕಾಲೇಜು ಪ್ರಾಂಶುಪಾಲರು ಎನ್ನೆಸ್ಸೆಸ್‌, ಎನ್‌ ಸಿಸಿ ವಿದ್ಯಾರ್ಥಿಗಳ ತಂಡದೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಬೇಕು. ಮಿಂಚಿನ ನೋಂದಣಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಸಂವಾದದಲ್ಲಿ ಅಪರ ಜಿಲ್ಲಾ ಧಿಕಾರಿ ಪ್ರಸನ್ನ, ವಿವಿಧ ಕಾಲೇಜು ಪ್ರಾಂಶುಪಾಲರು, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next