ವಿಜಯಪುರ: ಭಾರತ ಹಾಗೂ ರಾಜ್ಯ ಚುನಾವಣಾ ಆಯೋಗಗಳ ನಿರ್ದೇಶನದಂತೆ 01-01-2020ಕ್ಕೆ ಇದ್ದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆಂದೋಲನ ಆರಂಭಗೊಂಡಿದ್ದು ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕೋರಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,
ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆ ಅತ್ಯಂತ ಮಹತ್ವ ಪಡೆದಿದೆ. ಜಿಲ್ಲೆಯ 17.50 ಲಕ್ಷ ಮತದಾರರಲ್ಲಿ ಶೇ. 50 ನೈಜ ಮತದಾರರ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೋಷಮುಕ್ತ ಮತದಾರರ ಪಟ್ಟಿ ರೂಪಿಸುವಲ್ಲಿ ಸಹಕರಿಸಬೇಕು ಎಂದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸುಲಭದಲ್ಲಿ ನಡೆದರೂ ನಗರ ಪ್ರದೇಶದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವೂ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸೆ. 1ರಿಂದ 30ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಅದರಂತೆ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿಯಿಂದ ಬಿಟ್ಟು ಹೋದ, ಮರಣ ಹೊಂದಿದ, ಸ್ಥಳಾಂತರ ಹೊಂದಿರುವ ಮತದಾರರ ಮಾಹಿತಿಯನ್ನು ಕಲೆ ಹಾಕಲಿದ್ದು, ರಾಜಕೀಯ ಪಕ್ಷಗಳ ಪ್ರತಿನಿಗಳು ಸಹಕರಿಸಬೇಕು. ಅದರಂತೆ ಅಧಿಕಾರಿಗಳು ಸಹ ಮನೆ-ಮನೆಗೆ ಕಡ್ಡಾಯವಾಗಿ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಿದ್ದ ಬಗ್ಗೆ ದೃಢೀಕರಿಸಲು 1-9-2019ರಿಂದ 15-10-2019ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಕಾರಣ ಮತದಾರರು ತಮ್ಮ ಹೆಸರಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅದರಂತೆ ಹೆಸರನ್ನು ಸರಿ ಪಡಿಸಿಕೊಳ್ಳಬೇಕು. ಜನ್ಮ ದಿನಾಂಕ, ಹೆಸರುಗಳಲ್ಲಿ ಅಕ್ಷರ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಸುವರ್ಣವಕಾಶವಿದೆ ಎಂದರು.
ಮತದಾರರ ಅನುಕೂಲಕ್ಕಾಗಿ ನಗರದಲ್ಲಿ 50 ಸೇವಾ ಕೇಂದ್ರ ಸ್ಥಾಪಿಸಿದೆ. ಅದರಂತೆ ಅಟಲಜಿ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ಸಹಾಯವಾಣಿ 1950 ಸೌಲಭ್ಯ ಕಲ್ಪಿಸಲಾಗಿದೆ. ಬಿಎಲ್ಒಗಳಿಗೆ ಬಿಎಲ್ಒ (ತಂತ್ರಾಂಶ) ಆ್ಯಪ್, ಸಿಟಿಜನ್ ವೇರಿಫೈಯರೇಬಲ್ ಆ್ಯಪ್ ಸಹ ಲಭ್ಯವಿದ್ದು ಜಿಲ್ಲಾಡಳಿತ ಮೂಲಕ ಸಾರ್ವಜನಿಕರಿಗೆ ಎಲ್ಲ ರೀತಿಯಲ್ಲಿ ನೆರವು ಕಲ್ಪಿಸಲಾಗುತ್ತದೆ ಎಂದರು.
ಈ ಬಾರಿ ಮತದಾರರ ಪರಿಷ್ಕರಣೆ ಅಂಗವಾಗಿ ಬಿಎಲ್ಒ ಜೊತೆಗೆ ಹೆಚ್ಚುವರಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಿಇಒ ಹಾಗೂ ಮಹಾನಗರ ಪಾಲಿಕೆಗೆ ಜವಾಬ್ದಾರಿ ವಹಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ದೋಷ ಕಂಡು ಬಂದಲ್ಲಿ ತಕ್ಷಣ ಗಮನಕ್ಕೆ ತರುವಂತೆ ತಿಳಿಸಿದ ಅವರು, ಅಕ್ಟೋಬರ್ 15ಕ್ಕೆ ಅಂತಿಮ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು.
ಈ ಪರಿಷ್ಕರಣೆ ಅಂಗವಾಗಿ ಎಲ್ಲ ತಹಶೀಲ್ದಾರ್‌ರು, ಪೌರ ಕಾರ್ಮಿಕರ ಕುಟುಂಬಸ್ಥರು ಮತದಾರರ ಪಟ್ಟಿ ಪರಿಶೀಲಿಸಿಕೊಂಡು ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳಬೇಕು. ತಹಶೀಲ್ದಾರ್‌ರ ಸಲಹೆಯಂತೆ ಎಲ್ಲ ಮುಖ್ಯಾಧಿಕಾರಿಗಳು ಹೆಲ್ಪ್ಡೆಸ್ಕ್ಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ| ಔದ್ರಾಮ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಂದ್ರಕಾಂತ ಹಿರೇಮಠ, ಇರ್ಫಾನ್ ಶೇಖ್, ರವಿ ಬಿರಾದಾರ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.